ಬೆಂಗಳೂರು: “ಹಿಂದುಳಿದ ವರ್ಗದ ನಾಯಕನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ಆಗುತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಹೊಟ್ಟೆಕಿಚ್ಚಿನಿಂದ ಆರೋಪ ಮಾಡುತ್ತಿದ್ದಾರೆ. ಇದು ನನ್ನ ವಿರುದ್ಧ ಮಾತ್ರವಲ್ಲ, ಹಿಂದುಳಿದ ವರ್ಗದಿಂದ ಬಂದಿದ್ದ ಬಂಗಾರಪ್ಪ, ವೀರಪ್ಪ ಮೊಲಿ ಯಂತಹ ನಾಯಕರ ವಿರುದ್ಧವೂ ನಡೆದಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಹಿಂದುಳಿದವರನ್ನು ಸಿಎಂ ಆಗಲು ಬಿಡುವುದಿಲ್ಲ. ಒಂದು ವೇಳೆ ಸಿಎಂ ಆದರೂ ಬಹಳ ದಿನ ಅಧಿಕಾರದಲ್ಲಿ ಉಳಿಯಲು ಬಿಡುವುದಿಲ್ಲ.’
– ದುಬಾರಿ ವಾಚ್ ನೆಪದಲ್ಲಿ ತನ್ನ ವಿರುದ್ಧ ಸತತವಾಗಿ ನಡೆಯುತ್ತಿರುವ ದಾಳಿ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಹಿಂದದ ಗುರಾಣಿಯನ್ನು ಮುಂದು ಮಾಡಿದ ಪರಿಯಿದು.
ವಿಧಾನಸೌಧದಲ್ಲಿ ಶನಿವಾರ ರೈತ ಮುಖಂಡರೊಂದಿಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಪತ್ರಕರ್ತರ ಜತೆ ಮಾತನಾಡಿದ ಸಿದ್ದರಾಮಯ್ಯ, ಅಹಿಂದ ವರ್ಗದ ನಾಯಕನಾದ ತಾನು ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಗುತ್ತಿಲ್ಲ. ಹೀಗಾಗಿ ಹೊಟ್ಟೆಕಿಚ್ಚಿನಿಂದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
“ಹಿಂದುಳಿದ ವರ್ಗದವರು ಮುಖ್ಯಮಂತ್ರಿ ಆಗುವುದನ್ನು ಇಲ್ಲಿ ಸಹಿಸಿಕೊಳ್ಳಲಾಗುವುದಿಲ್ಲ. ಮುಖ್ಯಮಂತ್ರಿ ಆದರೂ ಬಹಳ ಕಾಲ ಅಧಿಕಾರ ನಡೆಸಲು ಅವಕಾಶ ನೀಡುವುದಿಲ್ಲ. ಬಹಳ ಹಿಂದಿನಿಂದಲೂ ಈ ರೀತಿ ನಡೆದುಕೊಂಡು ಬಂದಿದೆ. ಬಂಗಾರಪ್ಪ, ವೀರಪ್ಪ ಮೊಲಿ ಮುಖ್ಯಮಂತ್ರಿ ಆಗಿದ್ದರು.
ಆದರೆ ಅವರೆಷ್ಟು ವರ್ಷ ಆಡಳಿತ ನಡೆಸಿದರು ಅನ್ನುವುದು ಎಲ್ಲರಿಗೂ ಗೊತ್ತು. ಈಗ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ’ಎಂದು ಸಿದ್ದರಾಮಯ್ಯ ಮೇಲ್ವರ್ಗಗಳ ವಿರುದ್ಧ ನೇರ ವಾಗ್ಧಾಳಿ ನಡೆಸಿದರು.
ದುರುದ್ದೇಶದಿಂದ ಕುಮಾರಸ್ವಾಮಿ ನನ್ನ ವಿರುದ್ಧ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ. ನನ್ನ ವಿರುದ್ಧ ಆರೋಪ ಮಾಡಿ ನನ್ನ ತೇಜೋವಧೆ, ಚಾರಿತ್ರ್ಯಹರಣ ಮಾಡುವುದರ ಜತೆಗೆ ಪಕ್ಷ ಮತ್ತು ಸರಕಾರದ ವರ್ಚಸ್ಸಿಗೆ ಧಕ್ಕೆ ತರುವಂತಹ ಕೀಳು ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ ಎಂದು ಆರೋಪಿಸಿದರು.
ವಾಚ್ ಕಳ್ಳತನ ಆಗಿದ್ದರ ಬಗ್ಗೆ ಸುಧಾಕರ ಶೆಟ್ಟಿ ದೂರು ಕೊಟ್ಟಿದ್ದಾರೆ. ಅಲ್ಲದೆ ನನ್ನ ಬಳಿ ಇರುವ ವಾಚ್ ತಮ್ಮದಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಅವರ ಕಾರು ಚಾಲಕ ಸಹ ಅದನ್ನೇ ಹೇಳಿದ್ದಾನೆ. ಇಷ್ಟಾದರೂ ಕುಮಾರಸ್ವಾಮಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಪಕ್ಷ ಮತ್ತು ಸರಕಾರದ ವರ್ಚಸ್ಸು ಹಾಳು ಮಾಡಲು ಕುಮಾರಸ್ವಾಮಿ ಪಣ ತೊಟ್ಟಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಮಾರಸ್ವಾಮಿಗೆ ಬುದ್ಧಿ ಬೇಡ್ವಾ?
ನಾನು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತೇನೆ. ಹೋದಲ್ಲೆಲ್ಲಾ ಬೆಳ್ಳಿ ತಟ್ಟೆಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಹೋಗುತ್ತೇನೆ ಎಂಬಂತಹ ಅವಾಸ್ತವದ ಆರೋಪಗಳನ್ನು ಕುಮಾರಸ್ವಾಮಿ ಮಾಡುತ್ತಿದ್ದಾರೆ. ನಾನು ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವವನಲ್ಲ. ಯಾರಾದರೂ ಊಟದ ತಟ್ಟೆಯನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು ಸುತ್ತಾಡ್ತಾರಾ? ಈ ರೀತಿ ಆರೋಪ ಮಾಡಲಿಕ್ಕೆ ಕುಮಾರಸ್ವಾಮಿಗೆ ಬುದ್ಧಿ ಬೇಡ್ವಾ? ಅವರ ಈ ಮಾತುಗಳನ್ನು ಯಾರಾದ್ರೂ ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನನ್ನು ವಿಚಲಿತಗೊಳಿಸಲು ಕುಮಾರಸ್ವಾಮಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದರು.
ವಾಚ್ ಬಗ್ಗೆ ವರಿಷ್ಠರು ಕೇಳಿಲ್ಲ
ಶುಕ್ರವಾರ ದೆಹಲಿಗೆ ತೆರಳಿ ವಿಧಾನಸಭೆ ಉಪಚುನಾವಣೆ, ಜಿಪಂ, ತಾಪಂ ಚುನಾವಣೆ ಫಲಿತಾಂಶದ ಬಗ್ಗೆ ಹೈಕಮಾಂಡ್‌ಗೆ ವಿವರಣೆ ಕೊಟ್ಟಿದ್ದೇನೆ. ವಾಚ್ ವಿಚಾರವನ್ನು ವರಿಷ್ಠರೂ
ಕೇಳಲಿಲ್ಲ, ನಾನೂ ಪ್ರಸ್ತಾಪ ಮಾಡಿಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿದ್ದರಾಮಯ್ಯಬೆಳ್ಳಿ ತಟ್ಟೆಯಲ್ಲಿ ಊಟ ಮಾಡ್ತಾ¤ರೆ. ಹೋದಲ್ಲಿಗೆ ಅವರು ತಟ್ಟೆ ಒಯ್ಯೋದಿಲ್ಲ. ಬದಲಾಗಿ ಹಿಂಬಾಲಕರು ಒಯ್ತಾರೆ. ಮೈಸೂರಿನ ಸರಕಾರಿ ಅತಿಥಿಗೃಹದ ಕೆಲಸಗಾರರನ್ನೇ ಕೇಳಿ. ನಾನು ಬೆಳ್ಳಿ ತಟ್ಟೆ ವಿಷಯವನ್ನು ಹುಡುಗಾಟಿಕೆಗೆ ಪ್ರಸ್ತಾವಿಸಿಲ್ಲ.
-ಕುಮಾರಸ್ವಾಮಿ
-ಉದಯವಾಣಿ