ಕರ್ನಾಟಕ

ಜಿಲ್ಲಾ ಪಂಚಾಯಿತಿ ಸಮರ: ಆಡಳಿತಾರೂಢ ಕಾಂಗ್ರೆಸ್ ಗೆ ಮುನ್ನಡೆ

Pinterest LinkedIn Tumblr

cong-bjp

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲಾಗುತ್ತಿರುವ ತಾಲೂಕು-ಜಿಲ್ಲಾ ಪಂಚಾಯಿತಿ ಚುನಾವಣಾ ಫಲಿತಾಂಶ ಪ್ರಕ್ರಿಯೆ ಆರಂಭವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮುನ್ನಡೆಯತ್ತ ಸಾಗಿದೆ.

ಜಿಲ್ಲಾ ಪಂಚಾಯತ್ – ಒಟ್ಟು 30

ಪಕ್ಷಗಳು ಗೆಲುವು
ಕಾಂಗ್ರೆಸ್ 13
ಬಿಜೆಪಿ 08
ಜೆಡಿಎಸ್ 03
ಇತರೆ 06
ಒಟ್ಟು 30 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಫಲಿತಾಂಶ ಹೊರ ಬೀಳುತ್ತಿದ್ದು, ನಿರೀಕ್ಷೆಯಂತೆಯೇ ಆಡಳಿತಾ ರೂಢ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಒಟ್ಟು 30 ಜಿಲ್ಲೆಗಳ ಪೈಕಿ ಕಾಂಗ್ರೆಸ್ 13 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ 10 ಜಿಲ್ಲೆಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಜೆಡಿಎಸ್ ಪಕ್ಷ ಹಾಸನವನ್ನು ಹೊರತು ಪಡಿಸಿದರೆ ಇನ್ನಾವುದೇ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಾ ಸಾಧನೆ ಮಾಡಿಲ್ಲ.

ಹಾಸನದ ಒಟ್ಟು 40 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಆಗ್ರಸ್ಥಾನದಲ್ಲಿದೆ. ಇನ್ನು ಜೆಡಿಎಸ್ ತೀವ್ರ ಪೈಪೋಟಿ ನೀಡುತ್ತಿರುವ ಕಾಂಗ್ರೆಸ್ ಪಕ್ಷ 13 ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಬಿಜೆಪಿ ಕೇವಲ 2 ಸ್ಥಾನಗಳನ್ನು ಗಳಿಸುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು, ಜೆಡಿಎಸ್ ಪಕ್ಷದ ತೀವ್ರ ಪೈಪೋಟಿ ನಡುವೆಯೂ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಮೈಸೂರಿನ ಒಟ್ಟು 49 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು, ತೀವ್ರ ಪೈಪೋಚಿ ನೀಡಿದ ಜೆಡಿಎಸ್ ಒಟ್ಟು 18 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ ಕೇವಲ 8 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ.

ರಾಮನಗರ ಜಿಲ್ಲಾ ಪಂಚಾಯಿತಿಯ ಒಟ್ಟು 22 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದು, ಜೆಡಿಎಸ್ 8 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 21 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಫಲಿತಾಂಶ ಲಭ್ಯವಾಗಿದ್ದು, 5ರಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿ ಮತ್ತು 6 ಕ್ಷೇತ್ರ ಜೆಡಿಎಸ್ ಪಾಲಾಗಿವೆ. ಚಾಮರಾಜನಗರ ಜಿಲ್ಲೆಯ ಒಟ್ಟು 23 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, 8 ಕ್ಷೇತ್ರ ಬಿಜೆಪಿ ತೆಕ್ಕೆಗೆ ಜಾರಿದೆ. ಇನ್ನು ಕಾಂಗ್ರೆಸ್ ಗೆ ತೀವ್ರ ಪೈಪೋಟಿ ನೀಡುವ ವಿಶ್ವಾಸ ಹೊಂದಿದ್ದ ಜೆಡಿಎಸ್ ಶೂನ್ಯ ಸಾಧನೆಯೊಂದಿಗೆ ಮುಜುಗರಕ್ಕೀಡಾಗಿದೆ.

ಅಂತೆಯೇ ಉಡುಪಿ ಜಿಲ್ಲಾ ಪಂಚಾಯಿತಿ ಫಲಿತಾಂಶ ಕೂಡ ಹೊರಬಿದ್ದಿದ್ದು, ಇಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ. ಉಡುಪಿಯ ಒಟ್ಟು 26 ಕ್ಷೇತ್ರಗಳ ಪೈಕಿ ಬಿಜೆಪಿ ಬರೊಬ್ಬರಿ 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಗ್ರ ಸ್ಥಾನದಲ್ಲಿದೆ. ಇನ್ನು ಕಾಂಗ್ರೆಸ್ ಪಕ್ಷ 7 ಸ್ಥಾನದೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಜೆಡಿಎಸ್ ಗೆ ಮಾತ್ರ ಇಲ್ಲಿಯೂ ಯಾವುದೇ ಗೆಲುವು ಸಾಧಿಸಿಲ್ಲ.

ಮೂರೂ ಪಕ್ಷಗಳನ್ನು ತುದಿಗಾಲ ಮೇಲೆ ನಿಲ್ಲಿಸಿರುವ ತಾ.ಪಂ-ಜಿ.ಪಂ ಚುನಾವಣಾ ಸಮರದಲ್ಲಿ ಮತದಾರರ ನಿರ್ಣಯ ಇನ್ನು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ. ಈಗಾಗಲೇ ಅಧಿಕಾರದ ಅನಿಶ್ಚಿತತೆಯ ತೂಗುಗತ್ತಿ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಪಾಲಿಗೆ ಇದು ಅಗ್ನಿ ಪರೀಕ್ಷೆಯಾಗಿದ್ದರೆ, ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿರುವ ಬಿಜೆಪಿ ಪಾಲಿಗೆ ಅಳಿವು ಉಳಿವಿನ ಹೋರಾಟ. ಹಾಗೆಯೇ ಸದಾ ಕಿಂಗ್ ಮೇಕರ್ ಆಗುವ ಜೆಡಿಎಸ್ ಪಾಲಿಗೆ ಅಸ್ತಿತ್ವದ ಪ್ರಶ್ನೆಯಾಗಿ ಉಳಿದಿದೆ.

Write A Comment