ಕರ್ನಾಟಕ

ಠಾಣೆಗಳಲ್ಲಿ ನಿಂತ ಅನಾಥ ವಾಹನಗಳಿಗೆ ಮುಕ್ತಿ

Pinterest LinkedIn Tumblr

vehicle

ಬೆಂಗಳೂರು: ಅನಾದಿ ಕಾಲದಿಂದ ವಾರಸುದಾರರು ಸಿಗದೆ ಪೊಲೀಸ್‌ ಠಾಣೆಗಳ ಮುಂದೆ ಅನಾಥವಾಗಿ ನಿಂತಿರುವ ವಾಹನಗಳಿಗೆ ಕೊನೆಗೂ ವಿಲೇವಾರಿ ಭಾಗ್ಯ ಕೂಡಿ ಬಂದಿದೆ.

ಇದಕ್ಕೆ ಖುದ್ದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೇ ಮುಹೂರ್ತ ನಿಗದಿಪಡಿಸಿರುವುದು ವಿಶೇಷವಾಗಿದೆ.

ಪೊಲೀಸ್‌ ಠಾಣೆಗಳ ಸ್ವತ್ಛ ಪರಿಸರಕ್ಕೂ ಕಪ್ಪು ಚುಕ್ಕೆಯಂತಿರುವ ಹಳೆ ವಾಹನಗಳನ್ನು ಮಾರಾಟ ಮಾಡಿ ಇಲ್ಲವೇ ಅವುಗಳನ್ನು ಗುಜರಿ ಅಂಗಡಿಗಾದರೂ ಹಾಕಿ. ಒಟ್ಟಿನಲ್ಲಿ ಠಾಣೆಗಳಲ್ಲಿ ಹಳೆ ವಾಹನಗಳು ಕಾಣಬಾರದು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್‌ ಅವರಿಗೆ ಗೃಹ ಸಚಿವರ ಕಟ್ಟಪ್ಪಣೆಯಾಗಿದೆ.

ಗೃಹ ಮಂತ್ರಿಗಳ ಆದೇಶದ ಹಿನ್ನೆಲೆಯಲ್ಲಿ ವಾರಸುದಾರರಿಲ್ಲದ ವಾಹನಗಳ ಮಾಹಿತಿ ನೀಡುವಂತೆ ಡಿಜಿಪಿ ಅವರು ಪ್ರತಿ ಠಾಣೆಗೂ ಸೂಚನೆ ಹೊರಡಿಸಿದ್ದು, ಇನ್ನೆರಡು ವಾರದೊಳಗೆ ಹಳೆ ವಾಹನಗಳ ವಿಲೇವಾರಿ ನಡೆಯಲಿದೆ ಎಂದು ತಿಳಿದು ಬಂದಿದೆ.

ಒಂದು ಲಕ್ಷಕ್ಕೂ ಅಧಿಕ ವಾಹನಗಳು:
ಕೊಲೆ, ದರೋಡೆ, ಕಳ್ಳತನ, ಅಪಘಾತ, ವಾಹನಗಳವು ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಪೊಲೀಸರು ವಾಹನಗಳನ್ನು ವಶಪಡಿಸಿಕೊಳ್ಳುತ್ತಾರೆ. ಹೀಗೆ ವಶಪಡಿಸಿಕೊಂಡಿರುವ ವಾಹನಗಳ ಸಂಖ್ಯೆ ರಾಜ್ಯದಲ್ಲಿ ಸರಿಸುಮಾರು ಒಂದು ಲಕ್ಷಕ್ಕೂ ಅಧಿಕವಾಗಿವೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಮಂಗಳೂರು ಕಮೀಷನರೇಟ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಜಪ್ತಿಯಾಗಿವೆ. ಅಪರಾಧ ಪ್ರಕರಣಗಳ ತನಿಖೆ ಮುಗಿದ ಬಳಿಕ ನ್ಯಾಯಾಲಯಗಳ ಅನುಮತಿ ಪಡೆದು ಜಪ್ತಿಯಾದ ವಾಹನಗಳನ್ನು ಮೂಲ ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸುತ್ತಾರೆ. ಜಿಲ್ಲಾ ಹಾಗೂ ಕಮೀಷನರೇಟ್‌ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ದೊಡ್ಡ ಸಮಾರಂಭ ಆಯೋಜಿಸಿ ಕಳವು ಮಾಲುಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗುತ್ತದೆ.

ಆದರೆ ಕೆಲವು ಪ್ರಕರಣಗಳಲ್ಲಿ ಮೂಲ ವಾಸುದಾರರು ಪತ್ತೆಯಾಗುವುದಿಲ್ಲ. ಹಾಗಾಗಿ ವರ್ಷಗಳೇ ಕಳೆದರೂ ವಾಹನಗಳು ಠಾಣೆಗಳ ಮುಂದೆ ನಿಂತು ತುಕ್ಕು ಹಿಡಿಯುತ್ತಿವೆ. ರಾಜ್ಯ, ಹೊರ ರಾಜ್ಯಗಳಲ್ಲಿ ವಾಹನಗಳ ಕಳ್ಳತನವಾಗಿರುತ್ತದೆ. ಬಳಿಕ ಆ ವಾಹನಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿರುತ್ತದೆ. ಇದರಿಂದಾಗಿ ಆ ವಾಹನಗಳ ಸೂಕ್ತ ದಾಖಲೆಗಳು ಲಭ್ಯವಾಗದೆ ವಿಲೇವಾರಿಗೆ ಅಡ್ಡಿಯಾಗಿದೆ.

ಇಂತಹ ವಾಹನಗಳನ್ನು ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಆಗಾಗ್ಗೆ ಸಾರ್ವಜನಿಕವಾಗಿ ಹರಾಜು ನಡೆಸುತ್ತಾರೆ. ವಾರಸುದಾರರಿಲ್ಲದ ವಾಹನಗಳಿಗೆ ಪೊಲೀಸರೇ ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡುತ್ತಾರೆ. ಈ ಹರಾಜಿಗೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ. ಹೀಗಾಗಿಯೇ ಠಾಣಾವರಣಗಳೇ ಹಳೆ ವಾಹನಗಳ ಲಾಟ್‌ಗಳಾಗಿ ಪರಿಣಮಿಸಿವೆ.

ಮಾರಾಟಕ್ಕೆ ಅಡ್ಡಿಯೇನು?:
ಹಳೆ ವಾಹನಗಳ ವಿಲೇವಾರಿಗೆ ಬಹುಮುಖ್ಯವಾಗಿ ಅವುಗಳ ಗುಣಮಟ್ಟವೇ ಅಡ್ಡಿಯಾಗಿದೆ. ಪೊಲೀಸರ ವಶದಲ್ಲಿರುವ ವಾಹನಗಳ ಬಿಡಿ ಭಾಗಗಳು ಬಹುತೇಕ ಠಾಣಾವರಣದಲ್ಲೇ ನಾಪತ್ತೆಯಾಗಿರುತ್ತವೆ ಎಂಬ ದೂರುಗಳಿವೆ. ಇದರಿಂದ ಸಾರ್ವಜನಿಕರು ಪೊಲೀಸರ ಹರಾಜಿನಲ್ಲಿ ವಾಹನಗಳ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಗಳೇ ಬೇಸರ ವ್ಯಕ್ತಪಡಿಸುತ್ತಾರೆ.

ಗೃಹ ಸಚಿವರ ಹೊಸ ಪ್ಲಾನ್‌ ಏನು?:
ವಾರಸುದಾರರಿಲ್ಲದ ವಾಹನಗಳ ವಿಲೇವಾರಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಿಂದ ಮೈಸೂರಿಗೆ ಗೃಹ ಸಚಿವರು ಇಲಾಖಾ ಕಾರ್ಯ ನಿಮಿತ್ತ ತೆರಳುತ್ತಿರುವಾಗ ಮಾರ್ಗದುದ್ದಕ್ಕೂ ಪೊಲೀಸ್‌ ಠಾಣೆಗಳ ಮುಂದೆ ಹಳೆ ವಾಹನಗಳ ದರ್ಶನವಾಗಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೂಡಲೇ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಓಂಪ್ರಕಾಶ್‌ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಹಳೆ ವಾಹನಗಳ ಕುರಿತು ಮಾಹಿತಿ ಪಡೆದಿದ್ದಾರೆ.

ಆಗ ಸಚಿವರು, ಕೂಡಲೇ ಠಾಣೆಗಳ ಮುಂದಿರುವ ಹಳೆಯ ವಾಹನಗಳ ವಿಲೇವಾರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಸಾರ್ವಜನಿಕ ಹರಾಜಿನಲ್ಲಿ ವಾಹನಗಳ ಬಿಕರಿಯಾಗದೆ ಹೋದರೆ ಅವುಗಳನ್ನು ಗುಜರಿಗೆ ಮಾರಾಟ ಮಾಡುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದಾರೆ. ಹೀಗೆ ಸಂಗ್ರಹವಾದ ಹಣದಿಂದಲೇ ಇಲಾಖೆಗೆ ಹೊಸ ವಾಹನಗಳನ್ನು ಖರೀದಿಸುವಂತೆ ಸಹ ಸಚಿವರು ಸೂಚನೆ ನೀಡಿದ್ದಾರೆ.

ಪೊಲೀಸ್‌ ಠಾಣೆಗಳ ಮುಂದೆ ನಿಲ್ಲಿಸಲಾಗಿರುವ ಹಳೆಯ ವಾಹನಗಳ ನಿರ್ದಿಷ್ಟ ಕಾಲಮಿತಿಯ ವಿಲೇವಾರಿಗೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಇದರಿಂದ ಬರುವ ಆದಾಯದಲ್ಲಿ ಹೊಸ ವಾಹನಗಳ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
-ಡಾ.ಜಿ.ಪರಮೇಶ್ವರ್‌, ಗೃಹ ಸಚಿವ

-ಉದಯವಾಣಿ

Write A Comment