ನವದೆಹಲಿ/ ಚಂಡೀಗಡ (ಪಿಟಿಐ): ತಮ್ಮನ್ನು ಒಬಿಸಿಗೆ ಸೇರಿಸುವಂತೆ ಒತ್ತಾಯಿಸಿ ಜಾಟ್ ಸಮುದಾಯದವರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತಗ್ಗಿದ್ದು, ಹರಿಯಾಣದಲ್ಲಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಮತ್ತೊಂದೆಡೆ, ದೆಹಲಿಗೆ ನೀರು ಪೂರೈಸುವ ಮುನಾಕ್ ಕಾಲುವೆ ಮೇಲೆ ಭದ್ರತಾ ಸಿಬ್ಬಂದಿ ನಿಯಂತ್ರಣ ಸಾಧಿಸಿದೆ.
ತಗ್ಗಿದ ಪ್ರತಿಭಟನೆ: ಕಳೆದೊಂದು ವಾರದಿಂದ ಹೋರಾಟ, ಪ್ರತಿಭಟನೆ, ಹಿಂಸಾಚಾರದಿಂದ ತತ್ತರಿಸಿದ್ದ ಹರಿಯಾಣದಲ್ಲಿ ಸೋಮವಾರ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಜಾಟ್ ಸಮುದಾಯ ಮುಂದಿಟ್ಟಿರುವ ಮೀಸಲಾತಿ ಬೇಡಿಕೆಗಳ ಕುರಿತು ಪರಿಶೀಲನೆಗೆ ಕೇಂದ್ರ ಸರ್ಕಾರ ಸಮಿತಿ ರಚಿಸಿರುವ ಬೆನ್ನಲ್ಲೆ ಈ ಬೆಳವಣಿಗೆ ನಡೆದಿದೆ.
ತೀವ್ರತರ ಹಿಂಸಾಚಾರ ಕಂಡ ಕೈಥಾಲ್, ಅದರ ಸಮೀಪದ ಕಲಾಯತ್‌ನಲ್ಲಿ ಭಾನುವಾರವೇ ನಿಷೇಧಾಜ್ಞೆ ಸಡಿಸಿಲಾಗಿದೆ. ಆದರೆ, ಪ್ರತಿಭಟನೆ ಕೇಂದ್ರವಾಗಿದ್ದ ರೋಹ್ಟಕ್‌ನಲ್ಲಿ ಈಗಲೂ ಕರ್ಫ್ಯೂ ಜಾರಿಯಲ್ಲಿದೆ.
‘ರೋಹ್ಟಕ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೆ ಹಿಂಸಾಚಾರ ಘಟನೆಗಳು ವರದಿಯಾಗಿಲ್ಲ. ಭಾನುವಾರ ರಾತ್ರಿ ಶಾಂತಿಯುತವಾಗಿತ್ತು’ ರೋಹ್ಟಕ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನೆಯ ಕೇಂದ್ರ ಎನಿಸಿರುವ ರೋಹ್ಟಕ್ ಮಾತ್ರವಲ್ಲದೇ, ಭಿವಾನಿ, ಜಜ್ಜರ್, ಜಿಂದ್, ಹಿಸ್ಸಾರ್, ಹನ್ಸಿ, ಸೋನಿಪತ್ ಸೇರಿದಂತೆ ಹಲವೆಡೆ ತೀವ್ರತರ ಹಿಂಸಾಚಾರದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು.
ಹರಿಯಾಣದ ಹಲವೆಡೆ ಹಿಂಸಾರೂಪ ತಳೆದಿದ್ದ ಹೋರಾಟದಲ್ಲಿ 12 ಜನರು ಮೃತಪಟ್ಟಿದ್ದರು.
ಕಾಲುವೆ ಮೇಲೆ ಸೇನಾ ನಿಯಂತ್ರಣ: ಸೇನಾ, ಸಿಆರ್‌ಪಿಎಫ್ ಹಾಗೂ ಹರಿಯಾಣ ಪೊಲೀಸರು ಸೋಮವಾರ ನಸುಕಿನ 4ಗಂಟೆ ಸುಮಾರಿಗೆ ಕಾಲುವೆಯನ್ನು ನಿಯಂತ್ರಣ ಸಾಧಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲಾ ಪ್ರತಿಭಟನಾಕಾರರನ್ನು ತೆರವುಗೊಳಿಸಲಾಗಿದೆ. ಹರಿಯಾಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಹಾನಿಗೊಂಡಿರುವುದನ್ನು ದುರಸ್ತಿ ಮಾಡುತ್ತಿದ್ದಾರೆ. ಸಂಜೆಯ ವೇಳೆಗೆ ದೆಹಲಿಗೆ ನೀರು ಪೂರಣ ವ್ಯವಸ್ತೆ ಸಜಹ ಸ್ಥಿತಿಗೆ ಮರಳಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಪುಟ ಸಭೆ ಕರೆದ ಖಟ್ಟರ್: ರಾಜ್ಯದಲ್ಲಿ ನಡೆಯುತ್ತಿರುವ ಜಾಟ್ ಸಮುದಾಯದವರ ಪ್ರತಿಭಟನೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಮನೋಹರ್ ಲಾಲಾ ಖಟ್ಟರ್ ಅವರು ಸೋಮವಾರ ಮಧ್ಯಾಹ್ನ ಸಂಪುಟ ಸಭೆ ಕರೆದಿದ್ದಾರೆ.