ಕನ್ನಡ ವಾರ್ತೆಗಳು

ಕುಂಭಾಸಿ: ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಮನೆಯಲ್ಲಿ ಕಳ್ಳತನ

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ನೋಡಿ ಹೊಂಚು ಹಾಕಿದ ಕಳ್ಳರು ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಮನೆಗೆ ಕನ್ನ ಹಾಕಿದ ಘಟನೆ ಕುಂದಾಪುರ ತಾಲೂಕಿನ ಕುಂಭಾಸಿಯ ಆನೆಗುಡ್ಡೆ ರಸ್ತೆಯಲ್ಲಿ ನಡೆದಿದ್ದು ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

ಎಚ್. ನಾಗ ಮೊಗವೀರ ಎನ್ನುವವರ ಮನೆಯಲ್ಲಿ ಕಳ್ಳತನ ನಡೆದಿದ್ದು ಇವರು ಮಂಗಳೂರು ಡಿ.ಎ.ಆರ್.ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದು ಸದ್ಯ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.

Kumbasi_Theft_Case (3) Kumbasi_Theft_Case (1) Kumbasi_Theft_Case (7) Kumbasi_Theft_Case (4) Kumbasi_Theft_Case (2) Kumbasi_Theft_Case (6) Kumbasi_Theft_Case (9) Kumbasi_Theft_Case (5) Kumbasi_Theft_Case (8)

ಘಟನೆ ವಿವರ: ಕುಂಭಾಸಿಯ ಆನೆಗುಡ್ಡೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿಯೊಂದಿಗೆ ವಾಸವಿದ್ದ ನಾಗ ಮೊಗವೀರ ಅವರು ಅನಾರೋಗ್ಯದ ಚಿಕಿತ್ಸೆಗಾಗಿ ಫೆ.೨ರಂದು ಪತ್ನಿ ಸಮೇತ ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಚಿಕಿತ್ಸೆ ಮುಗಿಸಿ ಸೋಮವಾರ ಬೆಳಿಗ್ಗೆ ವಾಪಾಸ್ಸಾಗಿದ್ದು ಮನೆಗೆ ಬಂದು ನೋಡುವಾಗ ಬಾಗಿಲು ಅರ್ಧ ತೆರೆದ ಸ್ಥಿತಿಯಲ್ಲಿದ್ದು ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಒಳಗಡೆ ಪ್ರವೇಶಿಸಿ ನೋಡುವಾಗ ಎರಡು ಕೋಣೆಗಳಲ್ಲಿದ್ದ ಮೂರು ಕಪಾಟು, ಒಂದು ಪೆಟ್ಟಿಗೆಯನ್ನು ಒಡೆದು ಸಂಪೂರ್ಣ ಬಟ್ಟೆಬರೆಗಳು ಸಾಮಾನು-ಸರಂಜಾಮುಗಳನ್ನು ತಡಕಾಡಲಾಗಿತ್ತು. ಒಂದು ಕಪಾಟನ್ನು ಸಂಪೂರ್ಣ ಅಡ್ಡ ಮಲಗಿಸಿ ಒಳಗಿರುವ ಬೆಲೆಬಾಳುವ ವಸ್ತುಗಳಿಗಾಗಿ ಜಾಲಾಡಿದ ಕುರುಹುಗಳು ಕಂಡುಬಂದಿತ್ತು. ಕೂಡಲೇ ಕುಂದಾಪುರ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ತನಿಖೆ ವೇಳೆ ಕಪಾಟಿನಲ್ಲಿದ್ದ ೫ ಸಾವಿರ ನಗದು ಮಾತ್ರ ಕಳವುಗೈದಿರುವುದು ತಿಳಿದುಬಂದಿದೆ.

ಇನ್ನು ಮನೆಯ ಗೇಟಿಗೆ ಹಾಕಲಾಗಿದ್ದ ಬೀಗ ಯಥಾಸ್ಥಿತಿಯಲ್ಲಿದ್ದು ಕಾಂಪೌಂಡ್ ಹಾರಿ ಒಳಪ್ರವೇಶಿಸಿ ಮನೆಯ ಮುಖ್ಯ ದ್ವಾರವನ್ನು ಬಲವಾದ ವಸ್ತುವಿನಿಂದ ಮುರಿದು ಒಳಪ್ರವೇಶಿಸಿದ ಕಳ್ಳರು ಸಂಪೂರ್ಣ ಮನೆಯನ್ನು ಜಾಲಾಡಿದ್ದಾರೆ. ಯಾವುದೇ ಬೆಲೆ ಬಾಳುವ ವಸ್ತುಗಳು ಸಿಗದಿದ್ದಾಗ ಕಪಾಟಿನಲ್ಲಿ ಕೈಗೆ ಸಿಕ್ಕ ಐದು ಸಾವಿರ ನಗದು ಕಳವು ಮಾಡಿದ್ದಾರೆ.

ಅನಿಯಮಿತ ವಿದ್ಯುತ್ ಕಡಿತಕ್ಕೆ ಆಕ್ರೋಷ:
ಕುಂಭಾಸಿ ಒಂದು ಭಾಗದಲ್ಲಿ ರಾತ್ರಿ ವೇಳೆ ಅನಿಯಮಿತವಾಗಿ ವಿದ್ಯುತ್ ಕಡಿತವಾಗುತ್ತದೆ, ವಿದ್ಯುತ್ ಕಡಿತಗೊಂಡರೇ ಬೆಳಿಗ್ಗೆಯಾದರೂ ಸಂಪರ್ಕ ನೀಡುವುದಿಲ್ಲ, ಇದೆಲ್ಲವೂ ಕಳ್ಳತನ ನಡೆಯಲು ದಾರಿ ಮಾಡಿದಂತಾಗುತ್ತದೆ ಎಂದು ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ವಿದ್ಯುತ್ ಸಮಸ್ಯೆ ಉಂಟಾಗುತ್ತಿದ್ದು ರಾತ್ರಿ ವೇಳೆ ಏನೇ ಕುಕೃತ್ಯ ನಡೆದರೂ ತಿಳಿಯುವುದಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Write A Comment