
ಮಂಗಳೂರು : ಅಪರಿಚಿತ ದುಷ್ಕರ್ಮಿಗಳ ತಂಡವೊಂದು ಬಿಜೆಪಿ ಕಾರ್ಯಕರ್ತನ ಮೇಲೆ ಮಾರಂಣಾತಿಕ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಇಂದು ಸಂಜೆ ಬೈಕಾಂಪಾಡಿ ಸಮೀಪದ ಜೋಕಟ್ಟೆ ಎಂಬಲ್ಲಿ ನಡೆದಿದೆ.
ದುಷ್ಕರ್ಮಿಗಳಿಂದ ಕ್ರೂರವಾಗಿ ಹಲ್ಲೆಗೀಡಾದ ವ್ಯಕ್ತಿಯನ್ನು ತೋಕೂರು ಕೋಡಿಕೇರೆ ನಿವಾಸಿ ಪ್ರಕಾಶ್ ಪೂಜಾರಿ (36) ಎಂದು ಗುರುತಿಸಲಾಗಿದೆ.
ಪ್ರಕಾಶ್ ಅವರು ತನ್ನ ಮನೆಯಿಂದ ತನ್ನ ವ್ಯಾಪಾರ ಮಳಿಗೆಗೆ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದಾಗ ಜೋಕಟ್ಟೆ 3ನೇ ಗೇಟ್ ಬಳಿ ತಲುಪುತ್ತಿದ್ದಂತೆ ಮಾರಕಾಸ್ತ್ರಗಳೊಂದಿಗೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಪ್ರಕಾಶ್ ಅವರನ್ನು ಯದ್ವತದ್ವ ಕಡಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರಕಾಶ್ ಅವರನ್ನು ತಕ್ಷಣ ನಗರದ ಎ.ಜೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ. ಸುರತ್ಕಲ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಮಾರಣಾಂತಿಕ ಹಲ್ಲೆ :
ಮಂಗಳೂರು : ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂವರು ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ಯುವಕನೋರ್ವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕುಳಾಯಿ ಮಸೀದಿಯ ಬಳಿ ಶನಿವಾರ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ಸುರತ್ಕಲ್ ಬಳಿಯ ಕಾನ ನಿವಾಸಿ ಅನ್ವರ್ (22) ಗಾಯಾಳು ಯುವಕ. ಕೋಡಿಕೆರೆ ನಿವಾಸಿ ನಿಖಿಲ್, ಚಿತ್ರಾಪುರದ ಭರತ್ ಮತ್ತು ಕುಳಾಯಿ ನಿವಾಸಿ ಅರ್ಜುನ ಎನ್ನುವವರನ್ನು ಆರೋಪಿಗಳೆಂದು ಹೆಸರಿಸಲಾಗಿದ್ದು, ಇವರೆಲ್ಲ ಕೋಡಿಕೆರೆ ಲೋಕೇಶ್ ತಂಡದ ಸದಸ್ಯರೆನ್ನಲಾಗಿದೆ.
ಅನ್ವರ್ ನಿನ್ನೆ ಸಂಜೆ ಶಾಲೆಯಿಂದ ತನ್ನ ತಮ್ಮನನ್ನು ಕರೆದುಕೊಂಡು ಬರುತ್ತಿದ್ದಾಗ ಕುಳಾಯಿ ಮಸೀದಿ ಬಳಿ ಆತನನ್ನು ಅಡ್ಡಗಟ್ಟಿದ ಆರೋಪಿಗಳ ತಲ್ವಾರಿನಿಂದ ಹಲ್ಲೆ ನಡೆಸಿ ಚೂರಿಯಿಂದ ಇರಿದಿದ್ದಾರೆ. ಭುಜ ಮತ್ತು ಕೈಕಾಲಿಗೆ ಗಂಭೀರ ಗಾಯಗಳಾಗಿರುವ ಅನ್ವರ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹಲ್ಲೆ ನಡೆದಿದೆಯೆನ್ನಲಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ