ನವದೆಹಲಿ: 2001ರ ಸಂಸತ್ ಭವನದ ದಾಳಿ ರೂವಾರಿ, ನೇಣಿಗೇರಿದ ಉಗ್ರ ಅಫ್ಜಲ್ಗೆ ಗಲ್ಲುಶಿಕ್ಷೆಯಾಗಿ ಸಮಾಧಿ ಸೇರಿದ್ದರೂ, ದೆಹಲಿಯ ಜವಾಹರ ಲಾಲ್ ನೆಹರು ವಿವಿಯಲ್ಲಿ ಆತನ ಪರ ಘೊಷಣೆಗಳು ಮೊಳಗುತ್ತಿವೆ. ಇದು ಭಾರಿ ಚರ್ಚೆಗೊಳಗಾಗಿದ್ದು, ಅಫ್ಜಲ್ ಹಾಗೂ ಪಾಕಿಸ್ತಾನ ಪರ ಘೊಷಣೆ ಕೂಗಿದ್ದಕ್ಕಾಗಿ ದೇಶ ದ್ರೋಹ ಪ್ರಕರಣದ ಅಡಿಯಲ್ಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷನನ್ನು ಬಂಧಿಸಲಾಗಿದೆ.
ಮಂಗಳವಾರ ವಿದ್ಯಾರ್ಥಿಗಳ ಗುಂಪೊಂದು ಅಫ್ಜಲ್ಗೆ ಗಲ್ಲು ವಿಧಿಸಿದ್ದನ್ನು ವಿರೋಧಿಸಿ ನೆಹರು ವಿವಿ ಆವರಣದ ಒಳಗೆ ಘೊಷಣೆ ಕೂಗಿತ್ತು. ಅಫ್ಜಲ್ ಪರ ಕಾರ್ಯಕ್ರಮ ಆಯೋಜಿಸಲು ವಿವಿ ಅನುಮತಿ ನೀಡಿರಲಿಲ್ಲ. ಹಾಗಿದ್ದರೂ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕೆ ಎಬಿವಿಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಬಿಜೆಪಿ ಸಂಸದ ಮಹೇಶ್ ಗಿರಿ ಹಾಗೂ ಎಬಿವಿಪಿ ಕಾರ್ಯಕರ್ತರು ಅನಾಮಿಕ ವ್ಯಕ್ತಿಗಳ ವಿರುದ್ಧ ‘ರಾಷ್ಟ್ರದ್ರೋಹ’ದ ಅಡಿಯಲ್ಲಿ ದೂರು ದಾಖಲಿಸಿತ್ತು. ಇದರಂತೆ ಅಫ್ಜಲ್ ಪರ ಪ್ರತಿಭಟಿಸಿದವರ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ರಾಷ್ಟ್ರ ವಿರೋಧಿ ಘೊಷಣೆ ಕೂಗುತ್ತಿದ್ದ ಗುಂಪಿನಲ್ಲಿ ಜೆಎನ್ಯುು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಇದ್ದುದು ವಿಡಿಯೋದಲ್ಲಿ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು 3 ದಿನದ ಕಸ್ಟಡಿಗೆ ಒಪ್ಪಿಸಿದ್ದಾರೆ.
8 ವಿದ್ಯಾರ್ಥಿಗಳು ಡಿಬಾರ್: ಅಫ್ಜಲ್ ಪರ ಘೊಷಣೆ ಕೂಗಿದ ಆರೋಪದ ಮೇಲೆ 8 ವಿದ್ಯಾರ್ಥಿಗಳನ್ನು ವಿವಿಯಿಂದ ಡಿಬಾರ್ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಿಸ್ತು ಸಮಿತಿಯು ಸಲ್ಲಿಸಿದ್ದ ಮಧ್ಯಂತರ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳ ಲಾಗಿದೆ ಎಂದು ಕುಲಪತಿ ಜಗದೀಶ್ ಕುಮಾರ್ ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿಗಳ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ.
ತಾಯ್ನಾಡಿಗೆ ಅಪಮಾನ ಮಾಡುವವರನ್ನು ಕ್ಷಮಿಸಲಾಗದು. ದೇಶಾದ್ಯಂತ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಆದರೆ, ಸರಸ್ವತಿಯ ದೇಗುಲದಲ್ಲೇ ದೇಶಕ್ಕೆ ಅಪಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ.
| ಸ್ಮೃತಿ ಇರಾನಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ
ದೇಶ ವಿರೋಧಿ ಕೃತ್ಯ ಸಹಿಸಲ್ಲ
ಜೆಎನ್ಯುು ಆವರಣದಲ್ಲಿ ದೇಶ ವಿರೋಧಿ ಘೊಷಣೆ ಗಳನ್ನು ಕೂಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇಂತಹ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದಿದ್ದಾರೆ. ಯಾರಾದರೂ ದೇಶ ವಿರೋಧಿ ಘೊಷಣೆ ಕೂಗಿದರೆ ದೇಶದ ಏಕತೆ- ಸಮಗ್ರತೆ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸುತ್ತವೆ. ಇದಕ್ಕೆ ಅವಕಾಶ ಕೊಡುವುದಿಲ್ಲ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಗಿಲಾನಿ ವಿರುದ್ಧ ಕೇಸ್ ದಾಖಲು
ದೆಹಲಿ ಪ್ರೆಸ್ಕ್ಲಬ್ನಲ್ಲಿ ಅಫ್ಜಲ್ ಪರ ಘೊಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ವಿವಿಯ ಮಾಜಿ ಉಪನ್ಯಾಸಕ ಎಸ್ಎಆರ್ ಗಿಲಾನಿ ವಿರುದ್ಧ ದೇಶದ್ರೋಹದ ದೂರು ದಾಖಲಾಗಿದೆ. ಪ್ರೆಸ್ಕ್ಲಬ್ನಲ್ಲಿ ದೇಶ ವಿರೋಧಿ ಹೇಳಿಕೆ ನೀಡಿದ ಆರೋಪದಡಿ ಗಿಲಾನಿ ಮತ್ತು ನಾಲ್ವರು ಅನಾಮಿಕರ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದು ನವದೆಹಲಿ ವಲಯದ ಡಿಸಿಪಿ ಜತಿನ್ ನರ್ವಾಲ್ ತಿಳಿಸಿದ್ದಾರೆ.
ಎಡಪಕ್ಷಗಳಿಂದ ಟೀಕೆ: ಜೆಎನ್ಯುುನಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿರುವ ಸಿಪಿಐ, ಕನ್ಹಯ್ಯಾ ಕುಮಾರ್ನನ್ನು ಬಂಧಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ರಾಜಕೀಯ ಪಕ್ಷವಾಗಿ ದೇಶವಿರೋಧಿ ಕೃತ್ಯಗಳನ್ನು ಖಂಡಿಸುತ್ತೇವೆ. ಕಾನೂನು ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ ಎಡರಂಗದ ವಿದ್ಯಾರ್ಥಿ ಸಂಘಟನೆಗಳನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ತಿಳಿಸಿದ್ದಾರೆ.
ಉಂಡ ಮನೆಗೆ ದ್ರೋಹ ಇದೇ ತಾನೆ?
ಕೆ. ರಾಘವ ಶರ್ಮ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸಿಯಾಚಿನ್ ಕಣಿವೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರ ಯೋಧ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ. ಅದೇ ವೇಳೆ ಅಲ್ಲಿಂದ 7-8 ಕಿಮೀ ದೂರದಲ್ಲಿದ್ದ ಜವಾಹರಲಾಲ್ ನೆಹರು ವಿವಿಯ (ಜೆಎನ್ಯುು) ಕೆಲ ವಿದ್ಯಾರ್ಥಿಗಳು ದೇಶದ್ರೋಹಿ, ದೇಶದ ಸಂಸತ್ ಭವನದ ಮೇಲೆ ದಾಳಿ ನಡೆಸಿದ ಉಗ್ರ ಅಫ್ಜಲ್ನನ್ನು ಗಲ್ಲಿಗೇರಿಸಿದ ದಿನದ ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದರು. ಅಲ್ಲದೆ, ಪಾಕಿಸ್ತಾನ್ ಜಿಂದಾಬಾದ್, ಅಫ್ಜಲ್ ಜಿಂದಾಬಾದ್ ಎಂಬ ಘೊಷಣೆಗಳೂ ಈ ಶಿಕ್ಷಣ ಕೇಂದ್ರದ ಕಾರಿಡಾರ್ಗಳಲ್ಲಿ ಕೇಳಿಬಂದಿತ್ತು.
ಎಲ್ಲಿಯ ದಿಟ್ಟ ಸೇನಾನಿ ಲಾನ್ಸ್ ನಾಯಕ್ ಹನುಮಂತಪ್ಪ… ಎಲ್ಲಿಯ ದೇಶದ್ರೋಹಿ ಅಫ್ಜಲ್, ಮಕ್ಬೂಲ್ ಭಟ್? ದೇಶಪ್ರೇಮಿ ಭಾರತೀಯರು ಸಾವನ್ನು ಗೆದ್ದು ಬಾ ಎಂದು ಹನುಮಂತಪ್ಪನ ಪರ ಪ್ರಾರ್ಥಿಸುತ್ತಿದ್ದರೆ, ಭಾರತದಲ್ಲೇ ಹುಟ್ಟಿ ಬೆಳೆದ ಕೆಲ ವಿದ್ಯಾರ್ಥಿಗಳು, ಉಗ್ರಗಾಮಿಯೊಬ್ಬನನ್ನು ಹುತಾತ್ಮನಂತೆ ಬಿಂಬಿಸುತ್ತಿದ್ದರು!
ಉದ್ದೇಶಿತ ಕಾರ್ಯಕ್ರಮಕ್ಕೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿರೋಧಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ನೀಡಿದ್ದ ಅನುಮತಿಯನ್ನು ವಿಶ್ವವಿದ್ಯಾಲಯ ಹಿಂತೆಗೆದು ಕೊಂಡಿತ್ತು. ಆದರೂ ಡಿಎಸ್ಯುು, ಎಡಪಂಥೀಯ ಹಾಗೂ ಪ್ರಗತಿಪರ ಎಂದು ಹೇಳಿಕೊಂಡ ಕೆಲ ಸಂಘಟನೆ ಗಳಲ್ಲಿ ಸಕ್ರಿಯರಾಗಿರುವ ವಿದ್ಯಾರ್ಥಿಗಳ ಬೆಂಬಲದೊಂದಿಗೆ ಅಫ್ಜಲ್ ಪರ ಘೊಷಣೆಗಳನ್ನು ಕೂಗಲಾಗಿತ್ತು. ಯಾವಾಗ ಡಿಎಸ್ಯುು ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ನಡೆಸಲು ಎಬಿವಿಪಿ ಮುಂದಾಯಿತೋ ಆಲ್ ಇಂಡಿಯಾ ಸ್ಟೂಡೆಂಟ್ಸ್ ಯೂನಿಯನ್ (ಎಐ ಎಸ್ಎ), ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಸಂಘಟನೆಗಳು ಡಿಎಸ್ಯುುಗೆ ಬೆಂಬಲ ಘೊಷಿಸಿ, ಎಬಿವಿಪಿ ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದೆ ಎಂದು ಪ್ರತಿ ವಾಗ್ದಾಳಿ ನಡೆಸಿದವು.
ಅಫ್ಜಲ್ ದೋಷಿಯೆಂದು ನ್ಯಾಯಾಲಯಗಳಲ್ಲಿ ಸಾಬೀತಾಗಿ, ರಾಷ್ಟ್ರಪತಿಯಿಂದ ಕ್ಷಮಾದಾನ ಸಿಗದೆ ಆತನನ್ನು 2013ರಲ್ಲಿ ಗಲ್ಲಿಗೇರಿಸಲಾಯಿತು. ಹಾಗಿದ್ದರೂ, ದೇಶದ ಸಾರ್ವಭೌಮತ್ವಕ್ಕೇ ಧಕ್ಕೆ ತಂದ, ಅಮಾಯಕರನ್ನು ನಿಷ್ಕರುಣೆಯಿಂದ ಕೊಂದು ಹಾಕಿದ, ಭಯೋತ್ಪಾದಕ ಸಂಘಟನೆಗಳಲ್ಲಿ ಗುರುತಿಸಿಕೊಂಡ ವ್ಯಕ್ತಿಯನ್ನು ಹುತಾತ್ಮನಂತೆ ಕಂಡರೆ ಅದನ್ನು ಒಪ್ಪುವುದಾದರೂ ಹೇಗೆ? ಅಫ್ಜಲ್ನನ್ನು ಸಮರ್ಥಿಸಿಕೊಂಡು, ಆತನಿಗೆ ಶ್ರದ್ಧಾಂಜಲಿ ಸಲ್ಲಿಸಿ ಬೆಂಬಲ ಸೂಚಿಸುತ್ತಾರೆ ಎಂದರೆ ಈ ಸಂಘಟನೆಯ ವಿದ್ಯಾರ್ಥಿಗಳು ಭಾರತೀಯರೆನಿಸಿಕೊಳ್ಳಲು ಅರ್ಹರೇ? ಉಗ್ರನನ್ನು ಬೆಂಬಲಿಸುವ ಮೂಲಕ ಯಾವ ಸಂದೇಶ ರವಾನಿಸುತ್ತಿದ್ದಾರೆಂಬ ಪ್ರಶ್ನೆಗಳು ಮೂಡುವುದು ಸಹಜ.
ಈ ಮಧ್ಯೆ, ಕನ್ಹಯ್ಯಾ ಕುಮಾರ್ ಬಂಧನ ವಿರೋಧಿಸಿ ರುವ ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ‘ದೇಶದಲ್ಲಿ ಅಘೊಷಿತ ತುರ್ತಪರಿಸ್ಥಿತಿ ನಿರ್ಮಾಣ ವಾಗಿದೆ’ ಎಂದಿದ್ದಾರೆ. ಇದೇ ಯೆಚೂರಿ, ಉಗ್ರ ಯಾಕೂಬ್ ಮೆಮನ್ಗೆ ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ನೀಡಿದ್ದನ್ನು ಖಂಡಿಸಿದ್ದನ್ನು ಮರೆಯುವಂತಿಲ್ಲ. ಇಂಥವರಿಗೆ ಭಯೋತ್ಪಾದನೆಯಿಂದ ಸಂತ್ರಸ್ತರಾದವರ ವೇದನೆಯ ಅರಿವಿದೆಯೇ? ದೇಶದ ಏಕತೆ, ಸಾರ್ವಭೌಮತ್ವವನ್ನೇ ಪ್ರಶ್ನಿಸುವಂಥ ಧೋರಣೆ ಹೊಂದಿರುವ ಈ ಸಂಘಟನೆಗಳು ಯಾರನ್ನು ರಕ್ಷಿಸಹೊರಟಿವೆ?
ದೇಶದ್ರೋಹಿಗಳ ನಾಲಿಗೆ ಕತ್ತರಿಸಬೇಕು
ಭಾರತದಲ್ಲಿದ್ದುಕೊಂಡು ಪಾಕಿಸ್ತಾನದ ಬಗ್ಗೆ ಒಲವು ಹೊಂದಿರುವ ದೇಶದ್ರೋಹಿಗಳ ನಾಲಿಗೆಯನ್ನು ಏಕೆ ಕತ್ತರಿಸಬಾರದು ಎಂದು ಬಿಜೆಪಿ ಮುಖಂಡ ಕೈಲಾಸ್ ವಿಜಯ್ವರ್ಗಿಯಾ ಪ್ರಶ್ನಿಸಿದ್ದಾರೆ. ಅಫ್ಜಲ್ ಪರ ಘೊಷಣೆ ಕೂಗಿದ ವಿಚಾರವಾಗಿ ಟ್ವಿಟರ್ನಲ್ಲಿ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ.