ಮನೋರಂಜನೆ

ಚಿತ್ರರಂಗದಲ್ಲಿ ಬದಲಾವಣೆ ಸಹಜ ಸಂಗತಿ

Pinterest LinkedIn Tumblr

ShowPosterಚಿತ್ರರಂಗದಲ್ಲಿ ಬದಲಾವಣೆ ಎನ್ನುವುದು ಅತ್ಯಂತ ಸಹಜ ಸಂಗತಿ. ತಂತ್ರಜ್ಞಾನ, ವಸ್ತು, ನಟನೆಯ ಶೈಲಿ, ನಿರೂಪಣೆ ಹೀಗೆ ಎಲ್ಲವೂ ಅದೆಷ್ಟು ವೇಗವಾಗಿ ಬದಲಾಗುತ್ತಿರುತ್ತದೆಂದರೆ ಈಗ ತುಂಬ ಜನಪ್ರಿಯವಾಗಿದ್ದ, ಎಲ್ಲರೂ ಮೆಚ್ಚಿಕೊಂಡಿದ್ದ ಹಲವು ಟ್ರೆಂಡ್‌ಗಳು ಸ್ವಲ್ಪೇ ದಿನಗಳಲ್ಲಿ ಹಳತಾಗಿಬಿಡಬಹುದು. ಹೊಸ ಪ್ರೇಕ್ಷಕವರ್ಗಕ್ಕೆ ಈ ಹಳೆಯ ಸಿನಿಮಾಗಳು, ಅವುಗಳಲ್ಲಿನ ಅನೇಕ ಅಂಶಗಳು ತಮಾಷೆಯಾಗಿ ಕಾಣಬಹುದು.

ಈ ಬದಲಾವಣೆಯ ಅಂತರವನ್ನೇ ಗಮನದಲ್ಲಿಟ್ಟುಕೊಂಡು ‘ಬೂ ಮೈ ಷೋ’ವನ್ನು ರೂಪಿಸಿದ್ದಾರೆ ವಿಕ್ರಮ್‌ ಯೋಗಾನಂದ್‌. ‘ಬೂ ಮೈ ಷೋ’ ಇದು ಯೂಟ್ಯೂಬ್‌ ಚಾನೆಲ್‌ ಒಂದರ ಹೆಸರು. ಇತ್ತೀಚೆಗಷ್ಟೇ ಆರಂಭವಾದ ಈ ತಾಣದಲ್ಲಿ ಹಳೆಯ ಚಿತ್ರಗಳನ್ನು ಹೊಸ ರೀತಿಯಲ್ಲಿ ತಮಾಷೆಯಾಗಿ ವಿಮರ್ಶೆ ಮಾಡಲಾಗುತ್ತದೆ.

ಕಳೆದ ಐದಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ, ಹಲವು ಸಿನಿಮಾಗಳ ಛಾಯಾಚಿತ್ರಗ್ರಹಣ, ಸಂಕಲನ ವಿಭಾಗದಲ್ಲಿ ಕೆಲಸ ಮಾಡಿರುವ ವಿಕ್ರಮ್‌ ಯೋಗಾನಂದ್ ಅವರಿಗೆ ಇಂದಿನ ಜನರಿಗೆ ಇಷ್ಟವಾಗುವಂತೇ ಹೊಸ ಬಗೆಯಲ್ಲಿ ಸಿನಿಮಾ ವಿಮರ್ಶೆ ಮಾಡಬೇಕು. ಅದು ಸಿನಿಮಾದ ಕುರಿತು ಮಾಹಿತಿ ನೀಡುವುದರೊಟ್ಟಿಗೆ ಜನರಿಗೆ ಮನರಂಜನೆಯನ್ನೂ ನೀಡಬೇಕು ಎಂಬ ಹಂಬಲವಿತ್ತು. ಸ್ನೇಹಿತರಾದ ಕೈಲಾಶ್‌, ಗೌತಮ್‌ ಮತ್ತು ಪವನ್‌ ಕೂಡ ವಿಕ್ರಮ್‌ ಬೆಂಬಲಕ್ಕೆ ನಿಂತರು. ಅದಕ್ಕೆ ಅವರು ಆಯ್ದುಕೊಂಡಿದ್ದು ದೃಶ್ಯ ಮಾಧ್ಯಮ. ‘ಸ್ಮಾರ್ಟ್‌ ಸ್ಕ್ರೀನ್‌’ ಎಂಬ ನಿರ್ಮಾಣ ಸಂಸ್ಥೆಯನ್ನೂ ಆರಂಭಿಸಿ ಅದರಲ್ಲಿ ಹಳೆಯ ಸಿನಿಮಾವೊಂದರ ವಿಮರ್ಶೆಯನ್ನು ಮಾಡಿ ಅದರ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಪ್ರಸರಿಸಿದರು.

‘ಹಿಂದಿಯಲ್ಲಿ ಈ ರೀತಿಯ ಪ್ರಯತ್ನಗಳಾಗಿವೆ. ಅವು ಸಾಕಷ್ಟು ಯಶಸ್ಸೂ ಗಳಿಸಿವೆ. ಹೀಗೆ ದೃಶ್ಯರೂಪದಲ್ಲಿ ಸಿನಿಮಾ ವಿಮರ್ಶೆ ಮಾಡಿಯೇ ಪ್ರಸಿದ್ಧಿಗೆ ಬಂದಿರುವ ಹಲವು ತಂಡಗಳು ಅಲ್ಲಿವೆ. ಆದರೆ ಕನ್ನಡದಲ್ಲಿ ಇನ್ನೂ ಅಂತಹ ಪ್ರಯತ್ನಗಳಾಗಿರಲಿಲ್ಲ. ಅಲ್ಲದೆ ನಾವು ಮಾಡಿದ ಪ್ರಯತ್ನವೂ ಪೂರ್ತಿಯಾಗಿ ಹಿಂದಿಯ ಅನುಕರಣೆಯಲ್ಲ. ಬದಲಿಗೆ ನಮಗೆ ಬೇಕಾದಂತೆ ಬದಲಿಸಿಕೊಂಡಿದ್ದೇವೆ’ ಎನ್ನುತ್ತಾರೆ ವಿಕ್ರಮ್‌.

‘ಮೊದಲಿಗೆ ಹೊಸ ಸಿನಿಮಾಗಳನ್ನೇ ವಿಮರ್ಶೆ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದರೆ ಅವುಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸುವುದು ಕಷ್ಟ ಆಗಬಹುದು ಎಂಬ ಉದ್ದೇಶದಿಂದ ಹಳೆಯ ಸಿನಿಮಾಗಳ ಕುರಿತು ಮಾತನಾಡೋಣ ಎಂದು ನಿರ್ಧರಿಸಿದೆವು’ ಎಂದು ವಿವರಿಸುವ ಅವರು, ವಿಮರ್ಶೆಗಾಗಿ ಆರಿಸಿಕೊಂಡ ಮೊದಲ ಸಿನಿಮಾ ಸಾಯಿಕುಮಾರ್‌ ಅಭಿನಯದ ‘ಪೊಲೀಸ್‌ ಸ್ಟೋರಿ’.

ಈ ವಿಡಿಯೊದಲ್ಲಿ ಕ್ಯಾಮೆರಾ ಎದುರು  ಕುಳಿತುಕೊಂಡು ಆ ಸಿನಿಮಾದ ಬಗ್ಗೆ, ಅಲ್ಲಿನ ಸಂಭಾಷಣೆಗಳು, ದೃಶ್ಯಗಳ ಬಗ್ಗೆಯೆಲ್ಲಾ ಲೋಕಾಭಿರಾಮವಾಗಿ ಮಾತನಾಡುತ್ತಾ ಹೋಗುತ್ತಾರೆ. ಮಧ್ಯೆ ಮಧ್ಯೆ ಅವರ ಮಾತಿನಲ್ಲಿ ಬಂದುಹೋಗುವ ದೃಶ್ಯಗಳ ತುಣುಕುಗಳನ್ನೂ ಸೇರಿಸಲಾಗಿದೆ. ಹೀಗೆ ತೆರೆಯ ಮೇಲೆ ಕಾಣಿಸಿಕೊಂಡು ಸಿನಿಮಾದ ಬಗ್ಗೆ ಮಾತನಾಡುವವರು ಪವನ್‌ ವೇಣುಗೋಪಾಲ್‌ ಮತ್ತು ಕೈಲಾಶ್‌. ಪವನ್‌ ಈ ಪರಿಕಲ್ಪನೆಗೆ ಸ್ಕ್ರಿಪ್ಟ್‌ ಅನ್ನೂ ಬರೆಯುತ್ತಾರೆ. ಕೈಲಾಶ್‌ ಅದನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬ ಕುರಿತು ಯೋಜನೆ ರೂಪಿಸುತ್ತಾರೆ.
ಪವನ್‌ ಮತ್ತು ಕೈಲಾಶ್‌ ಅಲ್ಲದೆ ಇವರ ನಡುವೆ ಇನ್ನೊಬ್ಬ ವ್ಯಕ್ತಿ ಕೂತಿರುತ್ತಾರೆ. ‘ಆ ಇಬ್ಬರ ನಡುವೆ ಸುಮ್ಮನೇ ಇನ್ನೊಬ್ಬ ವ್ಯಕ್ತಿಯನ್ನು ಕೂಡಿಸಿಕೊಳ್ಳುತ್ತೇವೆ. ಅವರು ಏನೂ ಮಾತನಾಡುವುದಿಲ್ಲ. ಸುಮ್ಮನೇ ಪವನ್‌ ಮತ್ತು ಕೈಲಾಶ್‌ ಮಾತುಗಳನ್ನು ಕೇಳಿಸಿಕೊಳ್ಳುತ್ತಿರುತ್ತಾರೆ. ಬೇರೆ ಬೇರೆ ಸಿನಿಮಾಗಳ ಸಂದರ್ಭಕ್ಕೆ ತಕ್ಕಂತೆ ಆ ನಡುವಿನ ಪಾತ್ರವನ್ನು ಬದಲಾಯಿಸಿಕೊಳ್ಳುತ್ತೇವೆ. ಮುಂದೆ ಸೆಲೆಬ್ರಿಟಿಗಳನ್ನೂ ಮಧ್ಯ ಕೂರಿಸಿಕೊಂಡು ವಿಮರ್ಶೆ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ವಿಕ್ರಮ್‌.

‘ಸ್ಮಾರ್ಟ್‌ ಸ್ಕ್ರೀನ್‌’ನವರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ‘ಪೊಲೀಸ್‌ ಸ್ಟೋರಿ’ ಚಿತ್ರದ ವಿಮರ್ಶೆಗೆ ತುಂಬ ಒಳ್ಳೆಯ ಪ್ರತಿಕ್ರಿಯೆ ಬಂದಿದ್ದರಿಂದ ಅದನ್ನು ಯೂಟ್ಯೂಬ್‌ನಲ್ಲಿಯೂ ಪ್ರಸಾರ ಮಾಡಲಾಯಿತು. ಮೊದಲ ಪ್ರಯತ್ನಕ್ಕೆ ದೊರೆತ ಯಶಸ್ಸಿನಿಂದ ಉತ್ತೇಜಿತರಾದ ವಿಕ್ರಮ್‌ ತಂಡ ಮತ್ತೆ ಶಶಿಕುಮಾರ್‌ ಅಭಿನಯದ ‘ಕೆರಳಿದ ಕೇಸರಿ’ ಸಿನಿಮಾವನ್ನು ವಿಮರ್ಶೆಗೆ ಎತ್ತಿಕೊಂಡಿತು. ಇದಕ್ಕೂ ಜನರಿಂದ ಒಳ್ಳೆಯ ಪ್ರಶಂಸೆಯೇ ಸಿಕ್ಕಿತು. ಈ ಚಿತ್ರದಲ್ಲಿ ಮಾಸ್ಟರ್‌ ಆನಂದ್‌ ಪಾತ್ರದ ಕುರಿತು ಮಾಡಲಾದ ವಿಶ್ಲೇಷಣೆಯನ್ನು ಸ್ವತಃ ಅವರೇ ನೋಡಿ ಮೆಚ್ಚುಗೆಯ ಮಾತನಾಡಿದ್ದು ತಂಡದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

‘ಹತ್ತು ವರ್ಷ ಹಿಂದಿನ ಸಿನಿಮಾ ಟ್ರೆಂಡ್‌ಗಳು ಈಗಿಲ್ಲ. ನಮ್ಮ ಹಳೆಯ ಸಿನಿಮಾಗಳಲ್ಲಿನ ಸಂಭಾಷಣೆಗಳು, ಓವರ್‌ ಆ್ಯಕ್ಟಿಂಗ್‌, ಭಾವನಾತ್ಮಕ ಸನ್ನಿವೇಶಗಳು ಇವೆಲ್ಲವನ್ನೂ ಇಂದು ನೋಡುತ್ತಿದ್ದರೆ ನಗು ಬರುತ್ತದೆ. ಅಂತಹ ಸಿನಿಮಾಗಳ ಕುರಿತು ತಮಾಷೆಯಾಗಿ ಮಾತನಾಡುತ್ತಾ ಜನರಿಗೆ ಮನರಂಜನೆ ಒದಗಿಸುವುದು ನಮ್ಮ ಮುಖ್ಯ ಉದ್ದೇಶ’ ಎಂದು ವಿಕ್ರಮ್‌ ವಿವರಿಸುತ್ತಾರೆ.

ಸುಮಾರು ಎಂಟರಿಂದ ಹತ್ತು ನಿಮಿಷದ ಅವಧಿಯಲ್ಲಿ ಒಂದು ಸಿನಿಮಾದ ಬಗ್ಗೆ ಇಲ್ಲಿ ಮಾತನಾಡಲಾಗುತ್ತದೆ. ಇಂಥ ಸಿನಿಮಾಗಳನ್ನು ನೋಡಿ ಎಂದು ಪ್ರೇಕ್ಷಕರಿಗೆ ಸಲಹೆ ನೀಡುವುದು ಇದರ ಉದ್ದೇಶವಲ್ಲ. ಬದಲಿಗೆ ನಾವೆಲ್ಲರೂ ಈ ಮೊದಲು ನೋಡಿರುವ ಸಿನಿಮಾಗಳನ್ನೇ ನೆನಪಿಸಿಕೊಂಡು ಖುಷಿಪಡುವುದು ಈ ಪ್ರಯತ್ನದ ಇಂಗಿತ.
‘ಸ್ಮಾರ್ಟ್‌ ಸ್ಕ್ರೀನ್‌’ ಇದುವರೆಗೆ ರೂಪಿಸಿರುವ ಎರಡು ವಿಡಿಯೊಗಳನ್ನು ಸುಮಾರು 1.30 ಲಕ್ಷ ಜನರು ವೀಕ್ಷಿಸಿದ್ದಾರೆ. ಈ ನೋಡುಗ ವರ್ಗ ತಂಡದ ಉಮೇದು ಹೆಚ್ಚಿಸಿದೆ.

‘ಜನರು ನಮ್ಮ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರೇ ಫೋನ್‌ ಮಾಡಿ ಯಾವ ಸಿನಿಮಾ ವಿಮರ್ಶೆ ಮಾಡಬೇಕು ಎಂದಿ ಸೂಚಿಸುತ್ತಾರೆ’ ಎಂದು ಖುಷಿಯಿಂದ ಹೇಳಿಕೊಳ್ಳುವ ವಿಕ್ರಮ್‌ ಪ್ರೇಮಿಗಳ ದಿನದ ನಿಮಿತ್ತ ‘ಅಹಂ ಪ್ರೇಮಾಸ್ಮಿ’ ಚಿತ್ರದ ವಿಮರ್ಶೆಯ ವಿಡಿಯೊ ಪ್ರಸರಿಸಿದ್ದಾರೆ. ಹೀಗೆಯೇ ಇನ್ನೊಂದಿಷ್ಟು ಸಿನಿಮಾಗಳ ವಿಮರ್ಶೆಯನ್ನು ಪ್ರಸರಿಸಿ ನಂತರ ನಿರ್ದಿಷ್ಟ ನೋಡುವ ವರ್ಗ ರೂಪಿತವಾದಮೇಲೆ ಯಾವುದಾದರೂ ಟೀವಿ ವಾಹಿನಿಯಲ್ಲಿ ಪ್ರಸಾರ ಮಾಡುವಂತೆ ಸಂಪರ್ಕಿಸುವ ಯೋಜನೆಯನ್ನೂ ಅವರು ಹೊಂದಿದ್ದಾರೆ.

‘ಜನರಿಗೆ ಮನರಂಜನೆ ಕೊಡುವುದೇ ನಮ್ಮ ಮುಖ್ಯ ಉದ್ದೇಶ’ ಎನ್ನುವ ಸ್ಮಾರ್ಟ್‌ ಸ್ಕ್ರೀನ್‌ ಹುಡುಗರ ಪ್ರಯೋಗವನ್ನು goo.gl/AD857b ಕೊಂಡಿಯ ಮೂಲಕ ನೀವೂ ವೀಕ್ಷಿಸಬಹುದು.

Write A Comment