
ಮಂಗಳೂರು : ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾನಿಲಯದ ದಲಿತ ವಿದ್ಯಾರ್ಥಿ ರೋಹಿತ್ ವೇಮುಲರ ಸಾಂಸ್ಥಿಕ ಹತ್ಯೆ ಖಂಡಿಸಿ ಹಾಗೂ ಪ್ರಕರಣದ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿ ರಾಜ್ಯವ್ಯಾಪಿ ನಡೆದ ವಿಶ್ವವಿದ್ಯಾಲಯ ಬಂದ್ ಹಿನ್ನೆಲೆಯಲ್ಲಿ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಮುಖ್ಯದ್ವಾರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಮತೀಯವಾದ ಅಳಿಯಲಿ, ಕ್ಯಾಂಪಸ್ ಡೆಮಾಕ್ರಸಿ ಉಳಿಯಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾದ ಈ ಪ್ರತಿಭಟನೆಯಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅಸಹಜ ಸಾವಿನ ಕುರಿತು ಉನ್ನತಮಟ್ಟದ ತನಿಖೆ ಹಾಗೂ ಹತ್ಯೆಗೆ ಕಾರಣರಾದವರನ್ನು ಬಂಧಿಸಲು ಒತ್ತಾಯಿಸಲಾಯಿತು.ಜಿಲ್ಲೆಯ ಎಲ್ಲಾ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ಸಂಶೋಧನಾ ವಿದ್ಯಾರ್ಥಿ ಹರೀಶ್, ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಹಂಝ ಕಿನ್ಯಾ, ಬಿವಿಎಸ್ ಮುಖಂಡ ಸುರೇಶ್ ಪಿ.ಬಿ., ಸಾತ್ವಿಕ್ ಪಿ.ಜಿ. ಎಸ್ ಎಫ್ ಐ ಜಿಲ್ಲಾ ಸಂಘಟಕಿ ಮಾಧುರಿ ಬೋಳಾರ, ಸಂಶೋಧನಾ ವಿದ್ಯಾರ್ಥಿ ರಘು ಮೊದಲಾದವರು ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.