ಕನ್ನಡ ವಾರ್ತೆಗಳು

ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆ : ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸುಸ್ಥಿರ ಯೋಜನೆ : ಸಚಿವ ರೈ

Pinterest LinkedIn Tumblr

rai_press_meet_1

ಮಂಗಳೂರು: ಜಿಲ್ಲಾ ಪಂಚಾಯತ್‌/ತಾಲೂಕು ಪಂಚಾಯತ್‌ ಚುನಾವಣೆಗೆ ಸಂಬಂಧ ಪಟ್ಟ ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆ ಸೋಮವಾರ ಬಿಡುಗಡೆಗೊಂಡಿತ್ತು. ಮಂಗಳೂರಿನ ಪಕ್ಷದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಪ್ರಣಾಳಿಕೆ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ‌ ಜಿಲ್ಲೆಯಲ್ಲಿನ ಕೆಲವು ಸಮಸ್ಯೆಗಳ ಪರಿಹಾರದ ಜತೆಗೆ ಸಮಗ್ರ ಅಭಿವೃದ್ಧಿಗೆ ಹಲವು ನೂತನ ಸುಸ್ಥಿರ ಯೋಜನೆಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಗೆ ಪೂರಕವಾಗಿ ಭವಿಷ್ಯದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಒಳಗೊಂಡ ಪ್ರಣಾಳಿಕೆ ಇದಾಗಿದೆ ಎಂದು ಹೇಳಿದರು.

rai_press_meet_2 rai_press_meet_3

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಏಳು ಮಂದಿ ಶಾಸಕರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದುರ್ಬಲ ವರ್ಗದವರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ವಿವರಿಸಿದರು.

ನಿವೇಶನ ನೀಡಲು ಗ್ರಾ.ಪಂ.ಗಳಲ್ಲಿ ಕನಿಷ್ಠ 5 ಎಕ್ರೆ ಕಾದಿರಿಸುವುದು, ಸೌರಶಕ್ತಿಯುಕ್ತ ಜಿಲ್ಲೆಯಾಗಿ ರೂಪಿಸುವುದು, ನೂತನ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಅಂತರ್ಜಲ ಮರುಪೂರಣಕ್ಕೆ ಕಾರ್ಯಕ್ರಮ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ವಿಸ್ತರಿಸುವುದು,ತ್ಯಾಜ್ಯ ವಿಲೇವಾರಿ ಸಮಸ್ಯೆ ಪರಿಹಾರಕ್ಕೆ ಪರಿಸರ ಸ್ನೇಹಿ ನೂತನ ತಂತ್ರಜ್ಞಾನ ಅಳವಡಿಕೆ, ಗೋಶಾಲೆಗೆ ಮೇವು ಒದಗಿಸಲು ಈಗಾಗಲೇ ಅನುದಾನ ಒದಗಿಸಿದ್ದು, ಇದನ್ನು ಮುಂದುವರಿಸಿಕೊಂಡು ಹೋಗುವುದು ಹಾಗೂ ಮೇವು ಅಭಿವೃದ್ಧಿ ಪೂರಕ ಯೋಜನೆಗಳನ್ನು ರೂಪಿಸುವುದು, ಸೀಮೆ ಎಣ್ಣೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪ್ರಯತ್ನ, ಸ್ಥಳೀಯ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಪ್ರತಿಯೊಂದು ಜಿ.ಪಂ. ಕ್ಷೇತ್ರದಲ್ಲಿ ಸ್ಥಳೀಯ ಉತ್ಪನ್ನ ಉತ್ಪಾದಕ ಕೇಂದ್ರಗಳ ಸ್ಥಾಪನೆಗೆ ಬೆಂಬಲ, ರಬ್ಬರು, ಅಡಿಕೆ, ಗೇರುಬೀಜ, ತೆಂಗು, ಮೀನು ಹಾಗೂ ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನ ಕೇಂದ್ರಗಳ ಸ್ಥಾಪನೆಗೆ ಕ್ರಮ, ಗ್ರಾಮಕ್ಕೊಂದು ಕ್ರೀಡಾಂಗಣ ಯೋಜನೆ ಜಾರಿಗೊಳಿಸಲಾಗುವುದು ಎಂದು ರಮಾನಾಥ ರೈ ವಿವರಿಸಿದರು.

rai_press_meet_4

ಕಂಪೆನಿಗಳು ಕಾಲೇಜುಗಳಲ್ಲಿ ನಡೆಸುತ್ತಿರುವ ಕ್ಯಾಂಪಸ್‌ ಸೆಲೆಕ್ಷನ್‌ ಮಾದರಿಯನ್ನು ಗ್ರಾಮಪಂಚಾಯತ್‌ ಮೂಲಕ ಅಳವಡಿಸಿ ಗ್ರಾಮೀಣ ನಿರುದ್ಯೋಗ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಸ್ವಸಹಾಯ ಗುಂಪುಗಳಿಗೆ ಪ್ರೋತ್ಸಾಹ ಪ.ಜಾತಿ, ಪಂಗಡಗಳ ಕಾಲನಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುಧಿವುದು, ಕುಮ್ಕಿ ಜಮೀನಿಗೆ ಸಂಬಂಧಪಟ್ಟಂತೆ ಕಾನೂನಿನ ಪರಿಧಿಯಲ್ಲಿ ಪರಿಹಾರ ಒದಗಿಸುವುದು, ಎಂಡೋಸಲ್ಫಾನ್‌ ಪೀಡಿತರಿಗೆ ಪರಿಹಾರದ ಜತೆಗೆ ನಿರ್ವಸಿತರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.

ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಸಚಿವ ಬಿ.ಎ. ಮೊಯ್ದಿನ್, ಪಕ್ಷದ ಪ್ರಮುಖರಾದ ಸದಾಶಿವ ಉಳ್ಳಾಲ, ಕೆ.ಎಸ್.ಮುಹಮ್ಮದ್ ಮಸೂದ್, ಸುರೇಶ್ ಬಳ್ಳಾಲ್, ಪದ್ಮನಾಭ ನರಿಂಗಾನ, ಜಿ.ಎ. ಬಾವಾ,ಪಿ.ವಿ. ಮೋಹನ್, ನಝೀರ್ ಬಜಾಲ್, ಶಶಿಧರ ಹೆಗ್ಡೆ, ಕೆ.ಅಶ್ರಫ್‌, ಸಂತೋಷ್‌ ಕುಮಾರ್‌ ಶೆಟ್ಟಿ ಹಾಗೂ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್‌ ರೈ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment