ಕುಂದಾಪುರ: ಫೆ.20 ರಂದು ನಡೆಯಲಿರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಹಾಗೂ ಮತ ಎಣಿಕೆ ಕಾರ್ಯಗಳಿಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶನ್ವಯ ಇಲ್ಲಿನ ಭಂಡಾರ್‌ಕಾರ್‍ಸ್ ಕಾಲೇಜಿನ ಕಟ್ಟಡಗಳನ್ನು ಚುನಾವಣಾ ಕಾರ್ಯಗಳ ಬಳಕೆಗಾಗಿ ಕಂದಾಯ ಅಧಿಕಾರಿಗಳಿಗೆ ಬಿಟ್ಟು ಕೊಡಲಾಗಿದೆ.
ಕಳೆದ ಹಲವು ವರ್ಷಗಳಿಂದ ತಾಲ್ಲೂಕಿನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳ ಸಂದರ್ಭಗಳಲ್ಲಿ ತಾಲ್ಲೂಕು ಕೇಂದ್ರವಾದ ಕುಂದಾಪುರದ ಹೃದಯ ಭಾಗದಲ್ಲಿ ಇರುವ ಹಾಗೂ ಸಾಕಷ್ಟು ಅನೂಕೂಲತೆಗಳಿರುವ ಭಂಡಾರ್‌ಕಾರ್‍ಸ್ ಕಾಲೇಜನ್ನು ಚುನಾವಣೆಯ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುವುದು ವಾಡಿಕೆಯಾಗಿತ್ತು. ಆದರೆ ಈ ಬಾರಿ ಚುನಾವಣಾ ಸಂಬಂಧಿಸಿದ ಕಾರ್ಯಗಳು ಪ್ರಾರಂಭವಾಗುವ ಸಾಕಷ್ಟು ದಿನಗಳ ಮುಂಚಿತವಾಗಿಯೇ ಜಿಲ್ಲಾ ಚುನಾವಣಾಧಿಕಾರಿಗಳಾಗಿರುವ ಜಿಲ್ಲಾಧಿಕಾರಿಗಳು ಒಂದು ವಾರಗಳ ಕಾಲ ಕಾಲೇಜು ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಬೇಕು ಎನ್ನುವ ಆದೇಶವನ್ನು ಕುಂದಾಪುರದ ಕಂದಾಯ ಇಲಾಖೆಯ ಸಹಾಯಕ ಆಯುಕ್ತೆ ಎಸ್.ಆಶ್ವಥಿ ಅವರ ಮೂಲಕ ಕಾಲೇಜಿನ ಪ್ರಾಂಶುಪಾಲರನ್ನು ತಲುಪಿದೆ.
ಚುನಾವಣಾ ಕಾರ್ಯಗಳಿಗೆ ಕಾಲೇಜು ಬಳಕೆಯಾಗುತ್ತಿರುವುದರಿಂದಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಫೆ.೨೪ ರ ವರೆಗೆ ಕಾಲೇಜಿನ ಬಾರದೆ ಇರಲು ಹಾಗೂ ಒಂದು ವೇಳೆ ಆದೇಶದಲ್ಲಿ ಬದಲಾವಣೆಯಾದಲ್ಲಿ ಮಾಧ್ಯಮಗಳ ಮೂಲಕ ತಿಳಿಸಲಾಗುವುದು ಎಂದು ಕಾಲೇಜಿನ ಆಡಳಿತ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ. ಚುನಾವಣಾ ಕಾರ್ಯಗಳಿಗಾಗಿ ಒಂದು ವಾರಗಳ ಕಾಲ ಕಾಲೇಜಿನ ಕಟ್ಟಡಗಳು ಬಳಿಕೆಯಾಗುತ್ತಿರುವುದರಿಂದ ಕಾಲೇಜಿನ ದೈನಂದಿನ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎನ್ನುವ ಅಭಿಪ್ರಾಯಗಳು ಕಾಲೇಜಿನವರಿಗೆ ಇದೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಹಾಯಕ ಆಯುಕ್ತೆ ಎಸ್.ಅಶ್ವಥಿ ಯವರು ಕಳೆದ ಹಲವು ವರ್ಷಗಳಿಂದ ಚುನಾವಣೆಯ ಕರ್ತವ್ಯಗಳಿಗಾಗಿ ಕಾಲೇಜಿನ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಸ್ಟರಿಂಗ್, ಡಿ ಮಸ್ಟರಿಂಗ್, ಮತ ಪೆಟ್ಟಿಗೆಗಳ ಸಂಗ್ರಹಣೆ, ಭದ್ರತಾ ಕೊಠಡಿ ಹಾಗೂ ಮತ ಎಣಿಕೆಯ ಕಾರ್ಯಗಳಿಗಾಗಿ ಕಾಲೇಜಿನ ಬೇರೆ ಬೇರೆ ಕಟ್ಟಡಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣಾ ಕಾರ್ಯಗಳಿಗಾಗಿ ಕಾಲೇಜು ಕಟ್ಟಡವನ್ನು ಚುನಾವಣಾ ಕಾರ್ಯಗಳ ಬಳಕೆಗಾಗಿ ಬಿಟ್ಟು ಕೊಡಬೇಕು ಎಂದು ವಿನಂತಿಸಲು ಕಾಲೇಜಿನ ಪ್ರಾಂಶುಪಾಲರನ್ನು ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರೂ, ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.
ಚುನಾವಣಾ ಕರ್ತವ್ಯಗಳ ನಿರ್ವಹಣೆಗಾಗಿ ಅವರಿಂದ ಸರಿಯಾದ ಸಹಕಾರ ದೊರಕದೆ ಇರುವುದರಿಂದ ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ತಂದು ಆದೇಶವನ್ನು ನೀಡಬೇಕಾಯ್ತು. ಕಳೆದ ಬಾರಿಯ ಚುನಾವಣೆಯ ವೇಳೆಯಲ್ಲಿಯೂ ಇದೆ ರೀತಿಯ ಅಸಹಕಾರ ಧೋರಣೆ ಕಾಲೇಜಿನಿಂದ ದೊರಕಿರುವ ದೃಷ್ಟಾಂತವಿರುವುದರಿಂದಾಗಿ ಈ ಬಾರಿ ಕಾನೂನು ಕ್ರಮ ಅನುಸರಿಸುವುದು ಅನೀವಾರ್ಯವಾಯಿತು ಎಂದು ತಿಳಿಸಿದ್ದಾರೆ.