ಕುಂದಾಪುರ : ಉಡುಪಿ ಹಾಗೂ ಕುಂದಾಪುರ ತಾಲ್ಲೂಕಿನ ಹಲವು ಕಡೆಗಳಲ್ಲಿ ಅಡಿಕೆ ಹಾಗೂ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರ ತಂಡವನ್ನು ವಶಕ್ಕೆ ಪಡೆದುಕೊಂಡಿರುವ ಶಂಕರನಾರಾಯಣ ಪೊಲೀಸರು ಅವರಿಂದ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದ ವಿವರ : ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಉಡುಪಿ ತಾಲ್ಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿಯ ಕಾಸಡಿ ಮನೆಯ ವಿಜಯಕುಮಾರ ಶೆಟ್ಟಿಯವರು ಫೆ.೧೪ ರಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಮ್ಮ ಮನೆಯ ಎದುರಿನ ಗದ್ದೆ ಬಯಲಿನಲ್ಲಿ ಒಣಗಲು ಹಾಕಿದ್ದ ಸುಮಾರು 20,000 ಮೌಲ್ಯದ 2 ಕ್ವಿಂಟಾಲ್ ಅಡಿಕೆಗಳನ್ನು ಯಾರೋ ಅಪರಿಚಿತ ಕಳ್ಳರು, ಕಳವು ಮಾಡಿರುವುದಾಗಿ ತಿಳಿಸಿದ್ದರು.

ದೂರು ದಾಖಲಿಸಿಕೊಂಡ ಪೊಲೀಸರು ಎಸ್ಪಿ ಅಣ್ಣಾಮಲೈ, ಹೆಚ್ಚುವರಿ ಎಸ್.ಪಿ ಸಂತೋಷ್ಕುಮಾರ, ಡಿವೈಎಸ್ಪಿ ಎಂ.ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್ಪೆಕ್ಟರ್ ದಿವಾಕರ ಪಿ.ಎಂ ಅವರುಗಳ ಮಾರ್ಗದರ್ಶನದಲ್ಲಿ ಎಸ್.ಐ ದೇಜಪ್ಪ ಅವರ ನೇತ್ರತ್ವದಲ್ಲಿ ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.
ತನಿಖೆಯಲ್ಲಿ ಕಳ್ಳರ ಜಾಡನ್ನು ಹುಡುಕಿದ ಪೊಲೀಸರ ತಂಡ 76- ಹಾಲಾಡಿಯ ಪಡುಬೈಲು ಚೇರ್ಕಿಯ ಗಣೇಶ್ ಕುಲಾಲ್ (20), ರಟ್ಟಾಡಿ ಗ್ರಾಮದ ಗೊರ್ಕೊಡು ಗ್ರಾಮದ ಅಭಿಲಾಷ (20) ಹಾಗೂ ಹಾಲಾಡಿ ಗ್ರಾಮದ ಕಕ್ಕುಂಜೆ ಕ್ರಾಸ್ನ ವಸಂತ ಮೊಗವೀರ (20) ಎನ್ನುವವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಅಡಿಕೆ-ಬೈಕ್ ಕಳ್ಳರು:
ಈ ವೇಳೆ ಗಾವಳಿ ಹುತ್ತರ್ಕಿ, ಹಿಲಿಯಾಣ ಗ್ರಾಮದ ಕಾಸಾಡಿ, ಆಮ್ರಕಲ್ಲು ಹಾಗೂ ರಟ್ಟಾಡಿ ಗ್ರಾಮದಲ್ಲಿ ಕಳವು ಮಾಡಿದ ಸುಮಾರು ೪ ಕ್ವಿಂಟಾಲ್ ಅಡಿಕೆ. ೨೦೧೫ ರ ಜೂನ್ನಲ್ಲಿ ಕುಂದಾಪುರ ವಿನಾಯಕ ಟಾಕೀಸ್ ಬಳಿಯಲ್ಲಿ ಹಾಗೂ ನವೆಂಬರ್ ತಿಂಗಳಲ್ಲಿ ನಡೆದ ಕೊಡಿ ಹಬ್ಬದಂದು ಕೋಟೇಶ್ವರದಲ್ಲಿ ಕಳವು ಮಾಡಿದ ಸ್ಪೆಂಡರ್ ಹೀರೊ ಹೊಂಡಾ, ಬ್ರಹ್ಮಾವರವಿಠಲ ಮೆಡಿಕಲ್ ಬಳಿ ಕಳವು ಮಾಡಿದ ಸ್ಟಾರ್ ಸಿಟಿ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳವು ಮಾಡಿದ ಬೈಕ್ಗಳ ನಂಬರ್ ಪ್ಲೇಟ್ಗಳನ್ನು ಬದಲಾಯಿಸಿಕೊಳ್ಳುವ ಚೋರರು ಅದೇ ಬೈಕ್ಗಳನ್ನು ತಿರುಗಾಟಕ್ಕೆ ಬಳಸಿಕೊಳ್ಳುತ್ತಿದ್ದರು.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.