ಮಂಗಳೂರು: ಗ್ರಾ.ಪಂ. ವ್ಯಾಪ್ತಿಯಲ್ಲಿ ಕ್ರಮಬದ್ಧವಲ್ಲದ ಆಸ್ತಿಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ 9/11 `ಬಿ’ ವಿನಾಯಿತಿಗೊಳಿಸಿ ಸರ್ಕಾರ ಆದೇಶಿಸಿರುವುದು ತಾತ್ಕಾಲಿಕವಾಗಿದ್ದು, ಇದು ಮತದಾರಾರಿಗೆ ಮಾಡಿರುವ ವಂಚನೆ ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಆರೋಪಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 9/11 ಬಿ.ಯನ್ನು ವಿನಾಯಿತಿಗೊಳಿಸಿ ಸರಕಾರ ಆದೇಶಿಸಿರುವುದು ತಾತ್ಕಾಲಿಕ ಆದೇಶವಾಗಿದೆ. ಈ ತಾತ್ಕಾಲಿಕ ವಿನಾಯಿತಿ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಇಲ್ಲ. ಇದು ಮತದಾರರಿಗೆ ಮಾಡಿರುವ ಅನ್ಯಾಯ ಎಂದರು. ಈ ಬಗ್ಗೆ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ, ಎಂಎಲ್ಸಿ ಐವನ್ ಡಿಸೋಜಾ ಮುಂತಾದವರು ಹೇಳಿಕೆಗಳನ್ನು ಮಾತ್ರವೇ ನೀಡುತ್ತಿದ್ದಾರೆ ವಿನಾಃ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಹೆಚ್ಚುತ್ತಿರುವ ಮರಳು ಮಾಫಿಯಾ:
ರಾಜ್ಯದಲ್ಲಿ ಕಾಳಸಂತೆಯಲ್ಲಿ ಮರಳು ಮಾರಟ ಪ್ರಕರಣ ಹೆಚ್ಚುತ್ತಿದ್ದು, ಸ್ವತಹ ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪುತ್ರನೇ ಈ ಮರಳು ಮಾಫಿಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಿದ ಅವರು, ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಕೂಡ ಮರಳು ಸಿಗುತ್ತಿಲ್ಲ. ಇದರಿಂದಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಗೊಳ್ಳುತ್ತಿದ್ದು, ಮನೆ ಕಟ್ಟುವವರಿಗೆ ಸಮಸ್ಯೆಯಾಗಿದೆ. ಆದರೆ ಮರಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಎಂದು ಆರೋಪಿಸಿರು. ಈ ಬಗ್ಗೆ ಜಿಲ್ಲಾಧಿಕಾರಿಯಾಗಲೀ, ಉಸ್ತುವಾರಿ ಸಚಿವರಾಗಲೀ ಯಾವುದೇ ಮಾತು ಆಡದೇ ಮೌನವಹಿಸಿದ್ದಾರೆ ಎಂದು ಪಾಲೆಮಾರ್ ಹೇಳಿದರು.
ಪಕ್ಷದ ಪ್ರಮುಖರಾದ ಶಂಕರ್ ಭಟ್, ದಿವಾಕರ ಸಾಮಾನಿ, ಸೂರಜ್ ಕಲ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.