
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ನಲ್ಲಿ ಸಂಭವಿಸಿದ್ದ ಭೀಕರ ಹಿಮಪಾತದಲ್ಲಿ ಸಿಲುಕಿ ಸಾವನ್ನಪ್ಪಿದ 10 ಯೋಧರ ಪೈಕಿ ಉಳಿದ 9 ಯೋಧರ ಪಾರ್ಥಿವ ಶರೀರಗಳನ್ನು ಶನಿವಾರ ಹಿಮಗಡ್ಡೆಗಳ ಅಡಿಯಿಂದ ಎತ್ತಿ ವಿಮಾನದ ಮೂಲಕ ಲಡಾಖ್ ವಿಭಾಗದ ಸಿಯಾಚಿನ್ ಮೂಲ ಶಿಬಿರಕ್ಕೆ ತರಲಾಗಿದೆ.
ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮೃತ ಯೋಧರ ಪಾರ್ಥಿವ ಶರೀರಗಳನ್ನು ಹೊರತೆಗೆಯಲು ಇದುವರೆಗೂ ಸಾಧ್ಯವಾಗಿರಲಿಲ್ಲ. ಇಂದು ಹವಾಮಾನ ಪರಿಸ್ಥಿತಿ ಸುಧಾರಿಸಿದ ಕಾರಣ ಮೃತ ಯೋಧರ ಪಾರ್ಥಿವ ಶರೀರವನ್ನು ಹೊರ ತೆಗೆದು ಲೇಹ್ಗೆ ಕಳುಹಿಸಿಕೊಡಲಾಗಿದೆ.
ಎಲ್ಲಾ ಯೋಧರ ಪಾರ್ಥಿವ ಶರೀರಗಳೂ ಈದಿನ ಸಿಯಾಚಿನ್ ಮೂಲ ಶಿಬಿರಕ್ಕೆ ತಲುಪಿವೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 6 ದಿನಗಳ ನಂತರ ಹಿಮಗಡ್ಡೆಗಳ ಅಡಿ ಜೀವಂತ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ ಬಳಿಕ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ನಿನ್ನೆಯಷ್ಟೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿ ಹನುಮಂತಪ್ಪ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು,