ಬೆಂಗಳೂರು, ಫೆ.10- ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಗತ್ಯವಿರುವ ಗುಣಮಟ್ಟ ಕಾಪಾಡದೆ ರೈತರಿಗೆ ನಷ್ಟ ಉಂಟು ಮಾಡಿರುವ ಖಾಸಗಿ ಕಂಪನಿಗಳ ಬೇಜವಾಬ್ದಾರಿ ಬಗ್ಗೆ ಕೃಷಿ ಸಚಿವ ಕೃಷ್ಣಭೈರೇಗೌಡ ಇಂದು ಜೈವಿಕ ತಂತ್ರಜ್ಞಾನದ ಕಾರ್ಯಾಗಾರದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಗರದಲ್ಲಿ ನಡೆಯುತ್ತಿರುವ ಇಂಡಿಯಾ ಬಯೋ-2016ರ ಎರಡನೇ ದಿನವಾದ ಇಂದು ನಡೆದ ಜೈವಿಕ ತಂತ್ರಜ್ಞಾನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರಿಗೆ ನೀಡಲಾಗಿದ್ದ ಬಿತ್ತನೆ ಬೀಜ ಹಾಕಿ ಬೆಳೆ ಬೆಳೆದ ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ರಾಯಚೂರು, ತೆಲಂಗಾಣ, ಆಂಧ್ರದ ಮತ್ತಿತರ ಭಾಗಗಳಲ್ಲಿ ಸರ್ಕಾರ 36 ಕೋಟಿ ರೂ. ಪರಿಹಾರ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾನ್ಸಾಂಟೋ ಮತ್ತು ಇತರೆ ಖಾಸಗಿ ಕಂಪೆನಿಗಳು ಅನುಮತಿ ಪಡೆದು ನೀಡಿರುವ ಬೀಜ ರೈತರಿಗೆ ನಷ್ಟ ಉಂಟು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ರಾಜ್ಯಸರ್ಕಾರ ನೋಟಿಸ್ ಸಹ ನೀಡಿದೆ. ಆದರೆ ಕಂಪೆನಿಗಳು ಮಾತ್ರ ವಕೀಲರನ್ನಿಟ್ಟು ವಾದ ಮಾಡಿ ತಮ್ಮ ನಿಲುವನ್ನೇ ಸಮರ್ಥಿಸಿಕೊಳ್ಳುತ್ತಿವೆ. ಸರ್ಕಾರ ಸಲಹೆ ನೀಡಬಹುದು. ಆದರೆ ಆದೇಶ ಮಾಡಬಾರದು ಎಂಬ ರೀತಿಯಲ್ಲಿ ಕಂಪೆನಿಗಳು ವರ್ತಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗಿ ಕಂಪೆನಿಗಳ ಬೇಜವಾಬ್ದಾರಿಯಿಂದ ರೈತರಿಗೆ ಜೈವಿಕ ತಂತ್ರಜ್ಞಾನದ ಮೇಲೆ ಅಪನಂಬಿಕೆ ಉಂಟಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ಜೈವಿಕ ತಂತ್ರಜ್ಞಾನದಲ್ಲಿ ಲೋಪವಿಲ್ಲ. ಆದರೆ ಅದನ್ನು ಬಳಸುವ, ಅನುಷ್ಠಾನಗೊಳಿಸುವ ಹಾಗೂ ಗುಣಮಟ್ಟ ಕಾಪಾಡುವಲ್ಲಿ ತಪ್ಪುಗಳಾಗಿವೆ. ಅದನ್ನು ಸರಿಪಡಿಸಿಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು. ಬಿತ್ತನೆ ಬೀಜದಲ್ಲಿರುವ ಲೋಪ ಯಾರ ತಪ್ಪು ಎಂದು ಪ್ರಶ್ನಿಸಿದ ಅವರು, ತಂತ್ರಜ್ಞಾನ ಅನುಷ್ಠಾನಕ್ಕೆ ತರುವುದರಲ್ಲಿ ತಪ್ಪಾಗಿದೆ ಅಥವಾ ಗುಣಮಟ್ಟ ಕಾಪಾಡುವಲ್ಲಿ ತಪ್ಪಾಗಿದೆ. ಈ ಬಗ್ಗೆ ತಿಳಿಯಬೇಕಿದೆ.
2013ರಲ್ಲಿ ಇದೇ ರೀತಿ ಅವಘಡ ನಡೆದಿದೆ. 2015ರಲ್ಲಿ ಕೂಡ ಬಿತ್ತನೆ ಬೀಜ ಪೂರೈಸಿದ್ದಾರೆ. ಅದರೆ ಅದರಲ್ಲಿ ಆದ ನಷ್ಟಕ್ಕೆ ಕಂಪೆನಿ ಸಮರ್ಥನೆ ಕೊಟ್ಟಿದೆ. ಅದೇನೆಂದರೆ, ಬಿತ್ತನೆ ಮಾಡಿದ ಬೀಜ 110 ದಿನಗಳ ನಂತರ ಬೆಳೆ ಬಾರದಿದ್ದರೆ, ಔಷಧಿ ಸಿಂಪಡಣೆ ಮಾಡುವಂತೆ ಪ್ಯಾಕೆಟ್ನಲ್ಲಿ ಸೂಚಿಸಲಾಗಿದೆ ಎಂದು ಹೇಳಿಕೊಂಡಿದೆ. ಕಂಪನಿಗಳು ಕಾನೂನು ಬಳಸಿಕೊಂಡು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಬಾರದೆಂದು ಕಿವಿಮಾತು ಹೇಳಿದರು. ನಾವು ಜೈವಿಕ ತಂತ್ರಜ್ಞಾನದ ವಿರೋಧಿಯಲ್ಲ. ಕುಲಾಂತರಿ ಹೊರತುಪಡಿಸಿದ ಸಂಶೋಧನೆ ಹಾಗೂ ಅನುಷ್ಠಾನಕ್ಕೆ ಒತ್ತು ಕೊಡುತ್ತೇವೆ. ರಾಜ್ಯದ ಕೃಷಿ ಸಂಶೋಧನಾ ಸಂಸ್ಥೆ ಹಾಗೂ ಸ್ವಾಮಿನಾಥನ್ ಫೌಂಡೇಶನ್ ಕುಲಾಂತರಿ ಹೊರತಾದ ಜೈವಿಕ ತಂತ್ರಜ್ಞಾನದ ಉತ್ಪನ್ನಗಳಿಗೆ ರಾಜ್ಯ ಅನುದಾನ ಕೊಡುತ್ತಿದೆ. ಈ ಕ್ಷೇತ್ರದಲ್ಲಿ ನಡೆಯುವ ಹೊಸ ಸಂಶೋಧನೆಗಳನ್ನು ಮೊದಲು ರೈತರಿಗೆ ತಿಳಿಸಿ. ಅವರಲ್ಲಿ ನಂಬಿಕೆ ಹುಟ್ಟಿಸಿ. ನಂತರ ಅದು ಯಶಸ್ವಿಯಾಗುತ್ತದೆ. ಅದನ್ನು ಬಿಟ್ಟು ಸಚಿವರು ಅಧಿಕಾರಿಗಳಿಗೆ ಮನವರಿಕೆ ಮಾಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯಾವುದೇ ತಂತ್ರಜ್ಞಾನ ಅನುಷ್ಠಾನವಾದರೆ ಯಶಸ್ವಿಯಾಗುತ್ತದೆ. ಜೈವಿಕ ತಂತ್ರಜ್ಞಾನದ ಉತ್ಪನ್ನಗಳು ಹಾಗೂ ಇವುಗಳ ಬಗ್ಗೆ ವ್ಯಾಪಕ ಚರ್ಚೆಯಾಗುವ ಅಗತ್ಯವಿದೆ. ಈವರೆಗೂ ಈ ಬಗ್ಗೆ ವ್ಯವಸ್ಥಿತ ಚರ್ಚೆ ನಡೆದಿಲ್ಲ. ಇದರಿಂದ ಮೂಲ ಉದ್ದೇಶ ಹಾದಿ ತಪ್ಪುತ್ತಿದೆ ಎಂದು ಅಭಿಪ್ರಾಯಪಟ್ಟರು. ಕುಲಾಂತರಿ ತಳಿಗಳು, ಜೈವಿಕ ತಂತ್ರಜ್ಞಾನದ ಬಗ್ಗೆ ಆಗುವ ಲಾಭ-ನಷ್ಟಗಳ ಬಗ್ಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬಿಟಿ ಉತ್ಪನ್ನಗಳ ಕಾಯ್ದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಆದರೆ ಜಾರಿಯಾಗಿಲ್ಲ. ಇಂದು ಕೆಲ ಜೈವಿಕ ಕಂಪೆನಿಗಳು ನಷ್ಟದ ಉತ್ತರದಾಯಿತ್ವ ಹೊಣೆ ಮುಕ್ತ ಚರ್ಚೆಗೆ ಬರುತ್ತಾರೆ ಎಂದು ಮಾಹಿತಿ ನೀಡಿದರು.