
ವಾಷಿಂಗ್ಟನ್: ಮೂರು ವರ್ಷದ ಮಗುವೊಂದು ತಾತನ ಪಿಸ್ತೂಲ್ ಜತೆ ಆಟವಾಡುತ್ತಿದ್ದ ವೇಳೆ ಅಕಸ್ಮಾತ್ ಹಾರಿದ ಗುಂಡಿಗೆ ಆಕೆಯ ಸಹೋದರಿಯೇ ಬಲಿಯಾದ ಘಟನೆ ಅಮೆರಿಕದಲ್ಲಿ ಸಂಭವಿಸಿದೆ.
ಮಕ್ಕಳು ಆಟವಾಡುತ್ತಿದ್ದ ಕೊಠಡಿಯಿಂದ ಗುಂಡಿನ ಸದ್ದು ಕೇಳಿದ ಪೋಷಕರು ಧಾವಿಸಿದರು. ಕಿಂಬರ್ಲಿ ರೇಲಾಂಡರ್ (9) ತಲೆಗೆ ಬಿದ್ದ ಗುಂಡೇಟಿನಿಂದಾಗಿ ಅಪಾರ ಪ್ರಮಾಣದ ರಕ್ತಸ್ರಾವವಾಗುತ್ತಿತ್ತು. ತಕ್ಷಣವೇ ಹೆಲಿಕಾಪ್ಟರ್ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ‘ದಿ ವಾಷಿಂಗ್ಟನ್ ಪೋಸ್ಟ್ ’ ವರದಿ ಮಾಡಿದೆ.
ಪತ್ರಿಕೆ ನಡೆಸಿದ ಸಮೀಕ್ಷೆ: 2015ರ ಜನವರಿಯಿಂದ ಅಕ್ಟೋಬರ್ವರೆಗೆ ಅಮಾಯಕ ಮಕ್ಕಳ ಗುಂಡೇಟಿಗೆ ಬಲಿಯಾದವರ ಸಂಖ್ಯೆ 43. 3 ಅಥವಾ ಅದಕ್ಕಿಂತಲೂ ಸಣ್ಣ ವಯಸ್ಸಿನ ಮಕ್ಕಳೇ ‘ಆರೋಪಿ’ಗಳ ಸ್ಥಾನದಲ್ಲಿದ್ದಾರೆ. ಕೆಲವೊಮ್ಮೆ ಬಂದೂಕಿನೊಂದಿಗೆ ಆಟವಾಡುತ್ತಿದ್ದ ಮಕ್ಕಳು ಅದೇ ಬಂದೂಕಿಗೆ ಬಲಿಯಾಗಿರುವುದೂ ಉಂಟು ಎಂದು ‘ವಾಷಿಂಗ್ಟನ್ ಪೋಸ್ಟ್’ ಸಮೀಕ್ಷೆ ತಿಳಿಸಿದೆ.