ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆವ ರಣದ ಗಾಜಿನಮನೆ ಪಕ್ಕದ ಪಾರ್ಕಿಂಗ್ ಸ್ಥಳದಲ್ಲಿ ಸೋಮವಾರ ಮಧ್ಯಾಹ್ನ ಮರದ ಹಾವೊಂದು ಪ್ರತ್ಯಕ್ಷವಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಿಸಿತ್ತು.
ಕಂದುಬಣ್ಣದ ಆ ಹಾವನ್ನು ನೋಡಲು ಪಾರ್ಕಿಂಗ್ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದರು. ನಿಯಂತ್ರಣ ಕೊಠಡಿ ಸಿಬ್ಬಂದಿ ತಕ್ಷಣ ಬಿಬಿಎಂಪಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರು. ಕೂಡಲೇ ಸ್ಥಳಕ್ಕೆ ಬಂದ ಸ್ನೇಕ್ ಚಂದ್ರು ಹಾಗೂ ಬಿಬಿಎಂಪಿ ಅರಣ್ಯ ಇಲಾಖೆ ನೌಕರ ಪ್ರತಾಪ್ ಆ ಹಾವನ್ನು ಹಿಡಿದರು.
‘ಇದೊಂದು ಮರದ (ಬ್ರಾಂಜ್ ಬ್ಯಾಕ್ ಟ್ರೀ ಸ್ನೇಕ್) ಹಾವು. ಮರದ ಮೇಲೆ ವಾಸಿಸುವ ಈ ಹಾವು ನಿರು ಪದ್ರವಿ’ ಎನ್ನುತ್ತಾ ಮಾರುದ್ದದ ಹಾವನ್ನು ಹಿಡಿದು ತೋರಿದರು ಪ್ರತಾಪ್. ಬಳಿಕ ಅದನ್ನು ಬನ್ನೇರುಘಟ್ಟ ಉದ್ಯಾನಕ್ಕೆ ಒಯ್ದು ಬಿಡಲಾಯಿತು.
‘ಭಾನುವಾರ ಶಾಲೆಯೊಳಗೆ ಚಿರತೆ ನುಗ್ಗಿತ್ತು. ಇವತ್ತು ಬಿಬಿಎಂಪಿ ಕಚೇರಿಗೆ ಹಾವು ಬಂದಿದೆ. ವನ್ಯಜೀವಿಗಳಿಗೂ ನಗರದ ಸೆಳೆತ ಹೆಚ್ಚಾಗಿದೆ’ ಎಂದು ಹಾವನ್ನು ನೋಡಲು ನೆರೆದಿದ್ದ ಜನ ತಮಾಷೆ ಮಾಡುತ್ತಿದ್ದರು.