ಜೊಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕ): ದಕ್ಷಿಣ ಆಫ್ರಿಕದ ಚಿನ್ನದ ಗಣಿಯೊಂದರಲ್ಲಿ ಶುಕ್ರವಾರ ಭಾರಿ ಭೂಕುಸಿತ ಸಂಭವಿಸಿದ್ದು. 100ಕ್ಕೂ ಹೆಚ್ಚು ಮಂದಿ ಜೀವಂತ ಸಮಾಧಿಯಾಗಿರುವ ಭೀತಿ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕದ ಈಶಾನ್ಯ ಭಾಗದ ಮುಮಲಂಗಾ ಪ್ರಾಂತ್ಯದಲ್ಲಿ ಈ ದುರಂತ ಸಂಭವಿಸಿದ್ದು, ಕ್ಷಿಪ್ರ ಕಾರ್ಯಾಚರಣೆಯಲ್ಲಿ 49 ಮಂದಿ ಗಣಿ ಕಾರ್ಮಿಕರನ್ನು ಈವರೆಗೆ ರಕ್ಷಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ದಕ್ಷಿಣ ಆಫ್ರಿಕದ ಗಣಿಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ಆಳದ ಗಣಿಗಳಾಗಿದ್ದು, ಅತ್ಯಂತ ಅಪಾಯಕಾರಿ ಗಣಿಗಳು ಎಂದು ಪರಿಗಣಿತವಾಗಿವೆ.
ಭಾರಿ ಗಣಿ ಕುಸಿತದಲ್ಲಿ ಸುಮಾರು 115ಕ್ಕೂ ಹೆಚ್ಚು ಸದಸ್ಯರು ಭೂಗತ ಗಣಿಯೊಳಗೆ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಗಣಿ ಕಾರ್ಮಿಕರು ಮತ್ತು ನಿರ್ಮಾಣ ಕಾರ್ಮಿಕರ ಸಂಘದ (ಎಎಂಸಿಯು) ವಕ್ತಾರ ಮಂಝಿನಿ ಝುಂಗು ಹೇಳಿದ್ದಾರೆ. ಬೆಳಗಿನ 8.40 ಗಂಟೆಗೆ ಬಾರ್ಬೆರ್ಟೋನ್ನ ಮಕೋನಜ್ವಾನ್ ಚಿನ್ನದ ಗಣಿಯಲ್ಲಿ ಈ ದುರಂತ ಸಂಭವಿಸಿದೆ.