ಡಲ್ಲಾಸ್,ಫೆ.3-ದಕ್ಷಿಣ ಅಮೆರಿಕದಿಂದ ಬಂದಿದ್ದ ಝಿಕಾ ಪೀಡಿತ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಟೆಕ್ಸಾಸ್‌ನ ವ್ಯಕ್ತಿಯೊಬ್ಬನಿಗೆ ಮಾರಕ ಝಿಕಾ ವೈರಾಣು ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದು ಲೈಂಗಿಕ ಸಂಬಂಧದಿಂದ ವ್ಯಕ್ತಿಯಿಂದ ವ್ಯಕ್ತಿಗೆ ವ್ಯಾಪಿಸುವ ಸೋಂಕು ಎಂಬುದು ದೃಢಪಟ್ಟಿದೆ. ಗರ್ಭಸ್ಥ ಶಿಶುಗಳ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ ಎನ್ನಲಾಗುವ ಈ ಅನಿಷ್ಟ ರೋಗದ ವೈರಾಣು ಹೆಣ್ಣು-ಗಂಡುಗಳ (ರೋಗಪೀಡಿತ) ಸಂಪರ್ಕದಿಂದ ವರ್ಗಾವಣೆಗೊಂಡಿರುವ ಮೊದಲ ಪ್ರಕರಣ ಇದಾಗಿದೆ ಎಂದು ಹೇಳಿರುವ ವೈದ್ಯರು, ಸೊಳ್ಳೆಗಳ ಮೂಲಕ ಹಾಗೂ ಲೈಂಗಿಕ ಸಂಪರ್ಕದ ಮೂಲಕ ಅಂಟುವ ಈ ಸೋಂಕಿನ ಬಗ್ಗೆ ತೀವ್ರ ನಿಗಾ ವಹಿಸಬೇಕು ಎಂದು ಹೇಳಿದ್ದಾರೆ.
ಇದೊಂದು ಅಪರೂಪದ ರೋಗವೇ ಆದರೆ ಈ ಸೋಂಕು ಹೆಣ್ಣು ಗಂಡುಗಳ ಲೈಂಗಿಕ ಸಂಪರ್ಕದಿಂದ ಬರುತ್ತದೆ ಎಂಬುದು ನಮಗೆ ಗೊತ್ತಿರುವ ವಿಷಯವೇ ಆಗಿದೆ ಎಂದು ಡಲ್ಲಾಸ್ ಕೌಂಟಿಯ ಆರೋಗ್ಯ ಮತ್ತು ಮಾನವ ಸೇವೆಗಳ ನಿರ್ದೇಶಕ ಝಶಾರಿ ಥಾಂಪ್ಸನ್ ಹೇಳಿದ್ದಾರೆ.
ವ್ಯಕ್ತಿಗತ ಗೌಪ್ಯತೆ ರಕ್ಷಣೆ ಹಿನ್ನೆಲೆಯಲ್ಲಿ ಈ ವ್ಯಕ್ತಿಗಳ ಬಗ್ಗೆ ವೈದ್ಯರು ಯಾವುದೇ ವಿವರಗಳನ್ನು ನೀಡಿಲ್ಲ. ಆದರೆ ಮಹಿಳೆ ದಕ್ಷಿಣ ಅಮೆರಿಕದಿಂದ ಬಂದವಳು ಮತ್ತು ಈ ಪುರುಷ ವೆನಿಜುವೆಲಾದವನು ಎಂದಷ್ಟೇ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈಡಿಸ್ ಈಜಿಪ್ಟ್ ಸೊಳ್ಳೆಗಳು ಕಚ್ಚುವುದರಿಂದ ಝಿಕಾ ವೈರಾಣುಗಳು ಹರಡುತ್ತವೆ ಎಂದು ನಂಬಲಾಗಿತ್ತು. ಆದರೆ ಲೈಂಗಿಕ ಸಂಪರ್ಕದಿಂದಲೂ ಈ ಸೋಂಕು ಹರಡಲಿದೆ ಎಂಬುದನ್ನು ಕೊಲೊರಾಡೊ ಸಂಶೋಧಕನೊಬ್ಬ 2008ರಲ್ಲೇ ಪತ್ತೆ ಮಾಡಿದ್ದ. ಈ ಸಂಶೋಧಕ ಆಫ್ರಿಕದಿಂದ ಅಂಟಿಸಿಕೊಂಡು ಬಂದಿದ್ದ ವೈರಸ್ ಗಳನ್ನು ತನ್ನ ಪತ್ನಿಗೂ ಹರಡಿದ್ದ. ಇದೇ ವೇಳೆ ತಹಿತಿಯಲ್ಲಿನ ವ್ಯಕ್ತಿಯೊಬ್ಬನ ವೀರ್ಯದಲ್ಲೂ ವೈರಾಣು ಗೋಚರಿಸಿದ್ದವು.
ಆದರೆ ಇತ್ತೀಚೆಗೆ ರೋಗಗಳ ನಿಯಂತ್ರಣ ಕೇಂದ್ರದ ಡಾ.ಆನ್ ಶ್ಚುಚಟ್ ಅವರು, ಸೊಳ್ಳೆಕಡಿತದಿಂದಲೇ ಝಿಕಾ ರೋಗ ತಗುಲುತ್ತದೆ ಎಂದು ಹೇಳಿದ್ದರು. ಲ್ಯಾಟಿನ್ ಅಮೆರಿಕಾ ಮತ್ತು ವೆನಿಜುವೆಲ ಸೇರಿದಂತೆ ಕೆರೆಬಿಯನ್‌ನಲ್ಲಿ ಝಿಕಾ ವ್ಯಾಪಕವಾಗಿ ಕಂಡುಬಂದಿದೆ. ಇದು ತೀವ್ರ ಗತಿಯಲ್ಲಿ ವ್ಯಾಪಿಸಿಕೊಳ್ಳುವ ಸಾಂಕ್ರಾಮಿಕ ರೋಗವಾಗಿರುವುದರಿಂದ ಜನ ಎಚ್ಚರಿಕೆಯಿಂದಿರಬೇಕು ಎಂದು ವೈದ್ಯರು ವಿಶ್ವದಾದ್ಯಂತ ಎಲ್ಲರಿಗೂ ಎಚ್ಚರಿಕೆ ನಿಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ)ಕೂಡ ಈಗಾಗಲೇ ಜಾಗತಿಕ ತುರ್ತುಸ್ಥಿತಿ ಘೋಷಿಸಿರುವುದು ಈ ರೋಗದ ಭೀಕರತೆಯನ್ನು ತೋರಿಸುತ್ತದೆ.