ಬೆಂಗಳೂರು, ಫೆ.3-ತಮ್ಮನ್ನು ಪಕ್ಷದಲ್ಲಿ ದಿನದಿಂದ ದಿನಕ್ಕೆ ಕಡೆಗಣಿಸುತ್ತಿರುವುದಕ್ಕೆ ಮುನಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಸಂಸದ ಬಿ.ಎಸ್.ಯಡಿಯೂರಪ್ಪ ಚುನಾವಣಾ ಕಣದಿಂದಲೇ ದೂರ ಸರಿಯುವ ಬೆದರಿಕೆ ಹಾಕಿದ್ದಾರೆ. ಹೆಬ್ಬಾಳ, ದೇವದುರ್ಗ ಹಾಗೂ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯ ಸಂದರ್ಭದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸದೆ ತಟಸ್ಥರಾಗಿ ಉಳಿಯುವ ಮುನ್ಸೂಚನೆಯನ್ನು ತಮ್ಮ ಆಪ್ತರಿಗೆ ಹೇಳಿಕೊಂಡಿರುವುದಾಗಿ ತಿಳಿದುಬಂದಿದೆ.
ಈ ಬೆಳವಣಿಗೆಗಳಿಂದ ವಿಚಲಿತ ರಾಗಿರುವ ಬಿಜೆಪಿ ಮುಖಂಡರು ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಕಡೆಗಣಿ ಸುವುದಿಲ್ಲ. ಪ್ರಚಾರದ ವೇಳೆ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ.
ಆದರೆ ಹಠಮಾರಿ ಸ್ವಭಾವದ ಬಿಎಸ್‌ವೈ ಒಂದು ಬಾರಿ ಇಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂತೆಗೆಯುವುದಿಲ್ಲ ಎಂಬ ಶಪಥ ಮಾಡಿರುವುದು ಇತರ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಈ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್‌ಗೆ ಸೆಡ್ಡು ಹೊಡೆಯ ಬೇಕೆಂಬುದು ಬಿಜೆಪಿಯ ಉದ್ದೇಶ ವಾಗಿತ್ತು. ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರ ನಾಯಕತ್ವಕ್ಕೂ ಬಿಸಿ ಮುಟ್ಟಿಸುವುದು ಕಮಲ ನಾಯಕರ ಗುರಿಯಾಗಿತ್ತು. ರಾಜ್ಯದ ಜನತೆಯಲ್ಲಿ ಈಗಲೂ ಜನನಾಯಕ ಎನಿಸಿಕೊಂಡಿರುವ ಯಡಿಯೂರಪ್ಪನವರ ಈ ನಿರ್ಧಾರ ಬಿಜೆಪಿಯ ಜಂಘಾಬಲವನ್ನೇ ಅಲುಗಾಡುವಂತೆ ಮಾಡಿದೆ.
ಈವರೆಗೂ ಕೇವಲ ನೆಪಮಾತ್ರಕ್ಕೆ ಪ್ರಚಾರ ನಡೆಸಿರುವ ಬಿಎಸ್‌ವೈ ಪಕ್ಷದಲ್ಲಿ ನಡೆಯುತ್ತಿರುವ ಕೆಲವು ಆಂತರಿಕ ಬೆಳವಣಿಗೆಗಳಿಂದಾಗಿ ಮುನಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕಾರಣವೇನು: ಈ ಹಿಂದೆ ಬಿಜೆಪಿ ಚುನಾವಣೆಯ ವೇಳೆ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಷದ ಕೆಲ ನಾಯಕರು ಸೌಜನ್ಯಕ್ಕೂ ಪರಿಗಣಿಸಿರಲಿಲ್ಲ. ತಮ್ಮ ಬೆಂಬಲಿಗರಿಗೆ ಕನಿಷ್ಠ 20 ರಿಂದ 25 ಟಿಕೆಟ್ ನೀಡಬೇಕೆಂದು ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಬಿ.ಎಸ್.ಯಡಿಯೂರಪ್ಪನವರ ಬೇಡಿಕೆಯಾಗಿತ್ತು. ಪಕ್ಷದೊಳಗೆ ಮೊದಲಿನಿಂದಲೂ ಯಡಿಯೂರಪ್ಪನವರ ನಾಯಕತ್ವ ವನ್ನು ವಿರೋಧಿಸುತ್ತಿರುವ ಒಂದು ಬಣ ಯಾವುದೇ ಕಾರಣಕ್ಕೂ ಅವರ ಮೇಲುಗೈ ಆಗದಂತೆ ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿತ್ತು.
ಇತ್ತೀಚೆಗೆ ಮೂರೂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ವೇಳೆ ಬಿಎಸ್‌ವೈ ಬೆಂಬಲಿಗರಿಗೆ ಅಷ್ಟು ನಿರೀಕ್ಷಿತ ಪ್ರಮಾಣದಲ್ಲಿ ಟಿಕೆಟ್ ನೀಡಿಲ್ಲ. ಇದು ಸಹಜವಾಗಿ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಬೆಳವಣಿಗೆಗಳ ನಡುವೆಯೇ ಹಾಲಿ ರಾಜ್ಯಾಧ್ಯಕ್ಷರಾಗಿರುವ ಪ್ರಹ್ಲಾದ್ ಜೋಷಿ ಅಧಿಕಾರಾವಧಿ ಮುಗಿಯಲು ದಿನಗಣನೆ ಆರಂಭವಾಗಿದೆ. ಮೊದಲಿನಿಂದಲೂ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಎಸ್‌ವೈಗೆ ಅಡ್ಡಿ ಪಡಿಸಲೆಂದೇ ಕೆಲವು ಕಾಣದ ಶಕ್ತಿಗಳು ಒಳಗೊಳಗೇ ಮಸಲತ್ತು ನಡೆಸುತ್ತಿದ್ದಾರೆ. ಇದರಿಂದ ಬೇಸತ್ತಿರುವ ಯಡಿಯೂರಪ್ಪ ಅಭ್ಯರ್ಥಿಗಳ ಪರ ಪ್ರಚಾರ ನಡೆಸದೆ ತಟಸ್ಥರಾಗಿ ಉಳಿಯುವ ನಿರ್ಧಾರ ಕೈಗೊಂಡಿ ದ್ದಾರೆ ಎಂದು ತಿಳಿದುಬಂದಿದೆ. ಕಡೇ ಕ್ಷಣದಲ್ಲಿ ರಾಷ್ಟ್ರೀಯ ನಾಯಕರು ಪ್ರಚಾರ ನಡೆಸುವಂತೆ ಮುನ್ಸೂಚನೆ ಕೊಟ್ಟರೆ ಮಾತ್ರ ಕಣಕ್ಕಿಳಿಯಲು ಬಿಎಸ್‌ವೈ ತೀರ್ಮಾನಿಸಿದ್ದಾರೆ.