ಪಟ್ನಾ / ಹೊಸದಿಲ್ಲಿ : ಡೆಟ್ಟಾಲ್ ಗಿಂತಲೂ ಮನುಷ್ಯನ ಮೂತ್ರ ಹೆಚ್ಚು ಪರಿಣಾಮಕಾರಿಯಾಗಿರುವ ಬಹೂಪಯೋಗಿ ಪ್ರಬಲ ಔಷಧ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
“ವೈವಿಧ್ಯಮಯ ರೋಗಗಳು ಮತ್ತು ಹೋಮಿಯೋಪತಿ ಸರಳತೆ’ ಎಂಬ ಬಗ್ಗೆ ಪಟ್ನಾದಲ್ಲಿ ನಡೆಯುತ್ತಿರುವ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಲಾಲು ಮನುಷ್ಯನ ಮೂತ್ರದ ಶಕ್ತಿ ಏನೆಂಬುದನ್ನು ಪುಂಖಾನುಪುಂಖವಾಗಿ ವರ್ಣಿಸಿದರು.
“ಬಾಲ್ಯದಲ್ಲಿ ನಾನು ಗಾಯಗೊಂಡಾಗಲೆಲ್ಲ ನನ್ನ ಮೂತ್ರವನ್ನೇ ಗಾಯಕ್ಕೆ ಹಚ್ಚುತ್ತಿದೆ. ಅದರಿಂದ ಗಾಯ ಬಹು ಬೇಗನೆ ಗುಣವಾಗುತ್ತಿತ್ತು. ಅಂತೆಯೇ ಮನುಷ್ಯನ ಮೂತ್ರ ಆ್ಯಂಟಿ ಸೆಪ್ಟಿಕ್ ಎಂಬುದನ್ನು ಗಮನಿಸಿದೆ. ಆದರೆ ಜನರೀಗ ಡೆಟ್ಟಾಲ್ ಬಳಸುತ್ತಿದ್ದಾರೆ.ಕೆಲವರು ಅದನ್ನು ಕೈತೊಳೆದುಕೊಳ್ಳಲು ಕೂಡ ಬಳಸುತ್ತಿದ್ದಾರೆ. ಈಚಿನ ವರ್ಷಗಳಲ್ಲಿ ನಾವು ಸಾಧಿಸಿರುವ ಪ್ರಗತಿ ಎಂದರೆ ಇಷ್ಟೇ’ ಎಂದು ವ್ಯಂಗದಿಂದ ಹೇಳಿದರು.
“ಯಾವುದೇ ಬಗೆಯ ಔಷಧಗಳನ್ನು ಬಳಸದೆಯೇ ಎಲ್ಲ ರೋಗಗಳನ್ನು ಗುಣಪಡಿಸಬಲ್ಲ ಏಕೈಕ ವೈದ್ಯ ಕ್ರಮವೆಂದರೆ ಹೋಮಿಯೋಪತಿ. ಅಲೋಪತಿಗೆ ಕೇವಲ ಸರ್ಜರಿಯಲ್ಲಿ ಮಾತ್ರವೇ ನಂಬಿಕೆ ಇದೆ’ ಎಂದು ಲಾಲು ಹೇಳಿದರು.
ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮನುಷ್ಯನ ಮೂತ್ರವು ಗಿಡ, ಮರಗಳ ಬೆಳವಣಿಗೆಗೆ ಅತ್ಯಂತ ಪರಿಣಾಮಕಾರಿ ಎಂದು ಹೇಳಿದ್ದರಲ್ಲದೆ ತಾನು ದಿನ ನಿತ್ಯ ತನ್ನ ತೋಟದಲ್ಲಿ ತನ್ನ ಮೂತ್ರವನ್ನು ಸಂಗ್ರಹಿಸಿಟ್ಟು ಅವುಗಳನ್ನು ಗಿಡ ಮರಗಳಿಗೆ ಹಾಕುತ್ತಿದ್ದೇನೆ ಎಂದು ಹೇಳಿದ್ದರು.
ಲಾಲು ಅವರು ಈಚೆಗೆ ಇಂದಿರಾ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್‌ಗೆ ಹೋಗಿ ದಿಢೀರ್ ತಪಾಸಣೆ ಕೈಗೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಲಾಲು ಅವರು ಆರೋಗ್ಯ ಇಲಾಖೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಈ ವಿಷಯದಲ್ಲಿ ಅವರನ್ನು ಕಟುವಾಗಿ ಟೀಕಿಸಿದ್ದವು.
-ಉದಯವಾಣಿ