ಹೊಸದಿಲ್ಲಿ : ಹೈದರಾಬಾದ್ ವಿಶ್ವ ವಿದ್ಯಾಲಯದ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಯನ್ನು ಪ್ರತಿಭಟಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರ ಮೇಲೆ ದಿಲ್ಲಿ ಪೊಲೀಸರು ಕ್ರೌರ್ಯ ಮೆರೆದಿರುವ ವಿಡಿಯೋ ಚಿತ್ರಿಕೆಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಪರಿಣಾವಾಗಿ ದಿಲ್ಲಿ ಪೊಲೀಸರ ದಬ್ಟಾಳಿಕೆಗೆ ಸರ್ವತ್ರ ಖಂಡನೆ, ಟೀಕೆ ವ್ಯಕ್ತವಾಗಿದೆ.
ದಿಲ್ಲಿಯಲ್ಲಿನ ಆರ್‌ಎಸ್‌ಎಸ್ ಪ್ರಧಾನ ಕಾರ್ಯಾಲಯದ ಮುಂದೆ ಪ್ರತಿಭಟನ ನಿರತ ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೊಲೀಸರ ಬಲ ಪ್ರಯೋಗ ನಡೆಯಿತು. ವಿದ್ಯಾರ್ಥಿಗಳನ್ನು ಅವರು ಹಿಗ್ಗಾಮುಗ್ಗಾ ಥಳಿಸಿದರು ಎಂದಿರುವ ಸಂತ್ರಸ್ತ ವಿದ್ಯಾರ್ಥಿಗಳು ಈ ಕುರಿತ ವಿಡಿಯೋ ಚಿತ್ರಿಕೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಮಾಡಿ ದೇಶಾದ್ಯಂತದ ಗಮನ ಸೆಳೆದರು.
“ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಾಗೂ ಪೌರ ದಿರಿಸಿನಲ್ಲಿದ್ದ, ಬಹುತೇಕ ಆರ್‌ಎಸ್‌ಎಸ್‌ಗಳು, ಮುಗಿಬಿದ್ದು ಅವರನ್ನು ಯದ್ವಾತದ್ವಾ ಹೊಡೆದು ಹಿಂಸಿಸಿದರು. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು. ಪೊಲೀಸರು ಹುಡುಗರನ್ನು ಮಾತ್ರವಲ್ಲದೆ ಹುಡುಗಿಯರ ಮೇಲೂ ಕೈ ಮಾಡಿ ಅವರನ್ನು ಥಳಿಸಿದರು’ ಎಂದು ಜವಾಹರ್‌ಲಾಲ್ ನೆಹರೂ ವಿವಿಯ ವಿದ್ಯಾರ್ಥಿನಿ ಶ್ವೇತಾ ಹೇಳಿದ್ದಾರೆ.
ಆದರೆ ದಿಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಹೊಡೆದು ಹಲ್ಲೆ ಮಾಡಿದವರು ನಾವಲ್ಲ; ಯಾರೋ ಪೌರ ದಿರಿಸಿನಲ್ಲಿ ಇದ್ದವು’ ಎಂದು ತಮ್ಮ ಮೇಲಿನ ಆರೋಪಗಳನ್ನು ಕೊಡವಿಕೊಂಡಿದ್ದಾರೆ.
-ಉದಯವಾಣಿ