ಇಸ್ಲಾಮಾಬಾದ್, ಜ.29-ಭಯೋತ್ಪಾದಕ ಕೃತ್ಯಗಳು ನಡೆದ ಎಲ್ಲಾ ಸಂದರ್ಭಗಳಲ್ಲೂ ಭಾರತವು ಪಾಕಿಸ್ತಾನದ ವಿರುದ್ಧವೇ ಆರೋಪ ಮಾಡುತ್ತದೆ ಎಂದು ಆರೋಪಿಸಿರುವ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ಖಾಜಿ ಖಲೀಲುಲ್ಲಾ, ಭಯೋತ್ಪಾದನೆ ಕೇವಲ ಭಾರತವೊಂದರ ಸಮಸ್ಯೆಯಾಗಿರದೆ, ಪಾಕಿಸ್ತಾನವೂ ಸೇರಿದಂತೆ ಇಡೀ ವಿಶ್ವದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ವಾರದ ಕೊನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡುವ ಖಾಜಿ ಖಲೀಲುಲ್ಲಾ ಅವರು, ಭಯೋತ್ಪಾದಕ ಕೃತ್ಯಗಳಿಗೆಲ್ಲ ಭಾರತವು ಪಾಕಿಸ್ತಾನವನ್ನೇ ಹೊಣೆ ಮಾಡಿ ಆರೋಪ ಹೊರಿಸುತ್ತಿದೆ.
ಉಗ್ರವಾದವನ್ನು ಮಟ್ಟ ಹಾಕಲು ಇಸ್ಲಾಮಾಬಾದ್ ನಡೆಸುತ್ತಿರುವ ಪ್ರಯತ್ನಗಳನ್ನು ಪರಿಗಣಿಸದೆ ನಿರ್ಲಕ್ಷಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹ ಒಬ್ಬರು ಮಾಡುವ ಕೆಲಸವಲ್ಲ. ಅದು ಸಂಘಟಿತ ಹೋರಾಟ ಎಂದು ಹೇಳಿದ್ದಾರೆ.
ಭಾರತವು ಈ ರೀತಿ ಪಾಕಿಸ್ತಾನದ ವಿರುದ್ಧ ದೋಷಾರೋಪ ಮಾಡುವುದನ್ನು ಕೈಬಿಡಬೇಕು ಎಂದು ಹೇಳಿರುವ ಅವರು, ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದಲ್ಲಿ ಪರಸ್ಪರ ನಿರಂತರ ಸಂಪರ್ಕದಲ್ಲಿದ್ದು ವಿಷಯಗಳ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ನಮಗೂ ಭಾರತದಷ್ಟೇ ಜವಾಬ್ದಾರಿ ಇದೆ. ನಮ್ಮ ಪ್ರಯತ್ನಗಳನ್ನು ಕಡೆಗಣಿಸುವುದು ಸರಿಯಲ್ಲ. ಜ.2ರ ಂದು ನಡೆದಿರುವ ಭಾರತದ ಪಂಜಾಬ್ ರಾಜ್ಯದ ಪಠಾಣ್‌ಕೋಟ್ ವಾಯುನೆಲೆ ಮೇಲಿನ ದಾಳಿಯಲ್ಲಿ ಜೈಷ್-ಎ-ಮೊಹಮದ್ (ಜೆಇಎಂ) ಉಗ್ರರ ಕೈವಾಡವಿದೆ ಎಂಬ ಬಗ್ಗೆ ಕೆಲವು ದಾಖಲೆ ನೀಡಿರುವ ಭಾರತ ಉಗ್ರರ ವಿರುದ್ಧ ಕ್ರಮಕೈಗೊಳ್ಳುವಂತೆ ಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದನೆ ಕುರಿತಂತೆ ಭಾರತ ಮತ್ತು ಫ್ರಾನ್ಸ್ ನೀಡಿರುವ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಖಲೀಲುಲ್ಲಾ, ವಿಶ್ವದಾದ್ಯಂತ ಭಯೋತ್ಪಾದನೆ ಮಟ್ಟ ಹಾಕಲು ಪಾಕಿಸ್ತಾನವು ಉಗ್ರವಾದದ ವಿರುದ್ಧ ಸಮರ ಸಾರಿದೆ ಎಂದು ಉತ್ತರಿಸಿದ್ದಾರೆ.