ಕರ್ನಾಟಕ

ದಾರಿ ತಪ್ಪಿ ನಾಡಿಗೆ ಬಂದ ಆನೆಗಳು!

Pinterest LinkedIn Tumblr

aneಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರ ಬಂದಿರುವ ಏಳು
ಕಾಡಾನೆಗಳ ಹಿಂಡು ಹುಣಸೂರು ನಗರಕ್ಕೆ ಹತ್ತಿರದ ಮರೂರು ಗ್ರಾಮದ ಬಳಿಯ ತೋಟದಲ್ಲಿ ಬೀಡು ಬಿಟ್ಟಿವೆ.

ಸುತ್ತಮುತ್ತಲ ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದ್ದರೆ, ಅರಣ್ಯ ಇಲಾಖೆಯವರು
ಕಾರ್ಯಾಚರಣೆ ನಡೆಸಿ ನಗರಕ್ಕೆ ಆಗಮಿಸದಂತೆ ಸಲಗಗಳನ್ನು ಸುರಕ್ಷಿತವಾಗಿ ಕಾಡಿಗೆ ಮರಳಿಸಲು ಬೆಳಗ್ಗೆಯಿಂದಲೂ ಹರಸಾಹಸ ಪಡುತ್ತಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದ ಮುತ್ತುರಾಯನ ಹೊಸಹಳ್ಳಿ ಕಾವಲ್‌ ಕಡೆಯಿಂದ ಹೊರ ಬಂದಿರುವ ಒಂದು ಸಲಗ, ನಾಲ್ಕು ಹೆಣ್ಣಾನೆ, ಎರಡು ಮರಿಯಾನೆಗಳು ಮರೂರು ಸಮೀಪದ ಅಡ್ಡಹಳ್ಳದ ಕುರುಚಲು ಕಾಡಿನಲ್ಲಿ ಬೀಡುಬಿಟ್ಟಿವೆ.

ಎಂಟಳ್ಳಿ ಮಾರ್ಗ: ಮತ್ತಿಗೋಡು ವಲಯದಿಂದ ಮೇವನ್ನರಸಿ ಹೊರಬಂದಿರುವ ಆನೆಗಳು ಮುದ್ದನಹಳ್ಳಿ, ಹರೀನಹಳ್ಳಿ, ಮುತ್ತುರಾಯನಹೊಸಹಳ್ಳಿ, ಕಲ್‌ಬೆಟ್ಟ, ನಾಗನಹಳ್ಳಿ,
ತಿಪ್ಪಲಾಪುರ, ಕಟ್ಟೆಮಳಲವಾಡಿ ಮಾರ್ಗವಾಗಿ ಮರೂರು ಬಳಿಯ ತೆಂಗು-ಅಡಿಕೆ ತೋಟದ ಬಳಿಯ ಅಡ್ಡ ಹಳ್ಳದಲ್ಲಿ ಬೀಡು ಬಿಟ್ಟಿವೆ.

ಜನರ ಜಮಾವಣೆ: ಬೆಳಗ್ಗೆಯಿಂದಲೇ ಕಟ್ಟೆಮಳಲವಾಡಿ, ಹಿರಿಕ್ಯಾತನಹಳ್ಳಿ, ಹೊನ್ನೇನಹಳ್ಳಿ, ಮರೂರು ಗ್ರಾಮಸ್ಥರು ಸೇರಿದಂತೆ ಸಾವಿರಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದು, ಆನೆ ಹಿಂಡನ್ನು ಸುತ್ತುವರಿದರು. ಯಾವುದೇ ಅಪಾಯವಾಗದಂತೆ
ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೀಡು ಬಿಟ್ಟಿದ್ದು,
ಜನರನ್ನು ನಿಯಂತ್ರಿಸುತ್ತಿದ್ದಾರೆ. ಆನೆಗಳ ಹಿಂಡು ಬರುವ ದಾರಿಯುದ್ದಕ್ಕೂ ಬೆಳೆ ಹಾನಿ ಮಾಡಿವೆ.

ಬೆದರಿ ಬೇರೆ ದಾರಿಗೆ ಬಂದಿವೆ: ಸಾಮಾನ್ಯವಾಗಿ ಮೇವನ್ನರಸಿ ಕಾಡಿನಿಂದ ಹೊರಬರುವ
ಆನೆಗಳು ಮೇವು ತಿಂದು-ತುಳಿದು ಬೆಳಕು ಹರಿಯುವುದರೊಳಗೆ ಮತ್ತೆ ಕಾಡಿಗೆ
ವಾಪಾಸ್ಸಾಗುತ್ತಿದ್ದವು. ಆದರೆ ಈ ಆನೆಗಳು ದಾರಿ ತಪ್ಪಿವೆ.

ಬೆಳ್ಳಂಬೆಳಗ್ಗೆ ಆನೆ ಪ್ರತ್ಯಕ್ಷ: ಮರೂರು ಕಾವಲಿನ ರವಿ ಎಂಬಾತ ಸೋಮವಾರ ಬೆಳಗ್ಗೆ ಜಯರಾಂಗೆ ಸೇರಿದ ತೋಟದಲ್ಲಿ ತೆಂಗಿನ ಕಾಯಿ ಕೀಳಲು ತೋಟಕ್ಕೆ ಬಂದ ವೇಳೆ ಆನೆಗಳ ಹಿಂಡನ್ನು ಕಂಡು ಹೆದರಿ ಕಿರುಚಾಡಿ, ತೋಟದ ಮನೆಯತ್ತ ಓಟ ಕಿತ್ತಿದ್ದಾನೆ, ಆತ ಅಕ್ಕ- ಪಕ್ಕದವರಿಗೆ ವಿಷಯ ತಿಳಿಸಿದ್ದಾನೆ.

ಎಂದೂ ಬಾರದ ಕಾಡಾನೆಗಳ ಹಿಂಡನ್ನು ಕಂಡ ಜನರು ಗಾಬರಿಯಾದ ಜೊತೆಗೆ ತೋಟದಲ್ಲಿ ಬೀಡು ಬಿಟ್ಟಿದ್ದ ಆನೆಗಳ ಬಳಿ ಪಟಾಕಿ ಸಿಡಿಸುತ್ತಾ, ಕಲ್ಲು ಹೊಡೆಯುತ್ತಾ ದನಗಳಂತೆ ಅತ್ತಿಂದಿತ್ತ ಅಟ್ಟಾಡಿಸುತ್ತಾ, ಹೋ ಎಂದು ಕಿರುಚುತ್ತಾ ಪುಕ್ಕಟೆ ಮನರಂಜನೆ ಪಡೆದರು.

ವಿಷಯ ತಿಳಿದ ಅರಣ್ಯ ಇಲಾಖೆಯ ಎಸಿಎಫ್ಗಳಾದ ಪ್ರಸನ್ನಕುಮಾರ್‌, ಶ್ರೀಪತಿ ನೇತೃತ್ವದಲ್ಲಿ ಸಿಬ್ಬಂದಿ ಹಾಗೂ ಪೋಲೀಸರು ಆಗಮಿಸಿ ಜನರನ್ನು ನಿಯಂತ್ರಿಸಿದರು. ಆನೆಗಳನ್ನು ಹಳ್ಳದ ಕುರುಚಲು ಕಾಡಿನಲ್ಲಿ ಬೀಡು ಬಿಡಿಸಿ, ಸಂಜೆ ವೇಳೆ ಕಾಡಿಗಟ್ಟಲು
ಕಾರ್ಯಾಚರಣೆ ರೂಪಿಸಿದರು.

ಕಾರ್ಯಾಚರಣೆಗಿಳಿದ ಸಾಕಾನೆಗಳು: ಗ್ರಾಮಸ್ಥರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ನಿಟ್ಟಿನಲ್ಲಿ ಸೋಮವಾರ ಸಂಜೆ ವೇಳೆಗೆ ಕಾರ್ಯಾಚರಣೆಗೆ ಸಹಕಾರಿಯಾಗಲು ಮತ್ತಿಗೋಡು ಆನೆ ಶಿಬಿರದಿಂದ ಭೀಮ, ಕೃಷ್ಣ ಸೇರಿದಂತೆ ಅಭಿಮನ್ಯುವನ್ನು ಕರೆತರಲಾಗಿದೆ. ಆನೆಗಳನ್ನು ಹೆಡೆಮುರಿಕಟ್ಟಿ ಮೂಲ ಸ್ಥಾನ ಅರಣ್ಯಕ್ಕೆ ಸೇರಿಸಲು ಪಶು ವೈದ್ಯ ಡಾ.ಉಮಾಶಂಕರ್‌ ನೇತೃತ್ವದಲ್ಲಿ ಕಾರ್ಯಾಚರಣೆ
ಆಯೋಜಿಸಲಾಗಿತ್ತು.
-ಉದಯವಾಣಿ

Write A Comment