ಬೆಂಗಳೂರು, ನ.21- ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಮಹಾಸಮರವೆಂದೇ ಬಿಂಬಿತವಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿಯ ಮುನಿಸು ಮತ್ತೊಮ್ಮೆ ಬೀದಿಗೆ ಬಂದಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ತಮ್ಮ ಮಾತನ್ನು ಕೇಳದಿರುವ ಪಕ್ಷದ ಮುಖಂಡರ ವಿರುದ್ಧ ಮುನಿಸಿಕೊಂಡಿರುವ ಬಿಜೆಪಿಯ ಇಬ್ಬರು ಪ್ರಬಲ ನಾಯಕರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ತಟಸ್ಥರಾಗಿ ಉಳಿಯುವ ಬೆದರಿಕೆ ಹಾಕಿದ್ದಾರೆ. ಕಳೆದ ಭಾನುವಾರ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಕ್ಷದ ಕಚೇರಿಯಲ್ಲಿ ಸಮಾಲೋಚನಾ ಸಭೆ ಕರೆಯಲಾಗಿತ್ತು. ಈ ಸಭೆಗೆ ಪಕ್ಷದ ಮುಖಂಡರಾದ ಪ್ರಹ್ಲಾದ್ ಜೋಷಿ, ರ್.ಅಶೋಕ್, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತಕುಮಾರ್, ಸಿ.ಟಿ.ರವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು. ಸಭೆಗೆ ಹಾಜರಾಗುವಂತೆ ಖುದ್ದು ರಾಜ್ಯಾಧ್ಯಕ್ಷರಾದ ಪ್ರಹ್ಲಾದ್ ಜೋಷಿಯವರೇ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್‌ಗೆ ಆಹ್ವಾನ ನೀಡಿದ್ದರು.
ಆದರೆ, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ತಮ್ಮ ಸಲಹೆಯನ್ನು ಪರಿಗಣಿಸದ ಕಾರಣ ಉಭಯ ನಾಯಕರು ಉದ್ದೇಶಪೂರ್ವಕವಾಗಿಯೇ ಸಭೆಗೆ ಗೈರು ಹಾಜರಾಗಿದ್ದಾರೆಂದು ತಿಳಿದುಬಂದಿದೆ. ಅದರಲ್ಲೂ ಯಡಿಯೂರಪ್ಪ ಬೀದರ್ ಉತ್ತರ ಮತ್ತು ದೇವದುರ್ಗ ವಿಧಾನಸಭಾ ಕ್ಷೇತ್ರಗಳಿಗೆ ತಾವು ಸೂಚಿಸುವವರನ್ನೇ ಉಸ್ತುವಾರಿಗೆ ನೇಮಕ ಮಾಡಬೇಕೆಂದು ಸಲಹೆ ಮಾಡಿದ್ದರು.
ಅಭ್ಯರ್ಥಿಗಳ ಆಯ್ಕೆ, ಉಸ್ತುವಾರಿ ನೇಮಕ ಸೇರಿದಂತೆ ಕೆಲವು ವಿಷಯಗಳಲ್ಲಿ ತಮ್ಮ ಮಾತನ್ನು ಪರಿಗಣಿಸಬೇಕೆಂಬುದು ಬಿಎಸ್‌ವೈ ಮತ್ತು ಶೆಟ್ಟರ್ ವಾದವಾಗಿತ್ತು. ಬೀದರ್ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ತಮ್ಮ ಪರಮಾಪ್ತರಾದ ಮಾಜಿ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ನೀಡಬೇಕು. ಇದೇ ರೀತಿ ದೇವದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ರಾಜುಗೌಡ ನಾಯಕ್‌ಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಶೆಟ್ಟರ್ ಕೂಡ ಬೆಂಬಲ ಸೂಚಿಸಿ ಈ ಉಪಚುನಾವಣೆಯಲ್ಲಿ ಯಡಿಯೂರಪ್ಪನವರ ಸಲಹೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಪಕ್ಷದ ಮುಖಂಡರಿಗೆ ಕೋರಿದ್ದರು. ನಾವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಕಡೆಗಣಿಸಿದ್ದರಿಂದ ನಮಗೆ ಸೋಲಾಯಿತು. ಇನ್ನು ಮುಂದಾದರೂ ಅವರ ಸಲಹೆ-ಸೂಚನೆಗಳನ್ನು ಪಾಲಿಸಲೇಬೇಕು ಎಂದು ನಿರ್ದೇಶನ ನೀಡಿದ್ದರು.
ಆದರೆ, ಪಕ್ಷದ ಮುಖಂಡರು ಎಂದಿನಂತೆ ಯಡಿಯೂರಪ್ಪನವರ ಸಲಹೆಯನ್ನು ನಿರಾಕರಿಸಿದರು. ಬೀದರ್ ಉತ್ತರ ಕ್ಷೇತ್ರಕ್ಕೆ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ನೀಡುವ ಬಗ್ಗೆ ಬಿಎಸ್‌ವೈ ಬಗ್ಗೆ ಚರ್ಚಿಸಲೇ ಇಲ್ಲ. ಕೇವಲ ನೆಪಮಾತ್ರಕ್ಕೆ ಈ ಎರಡೂ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಇನ್ನು ಉಸ್ತುವಾರಿ ನೇಮಕಾತಿಯಲ್ಲೂ ಬೀದರ್ ಉತ್ತರಕ್ಕೆ ಮಾಜಿ ಸಚಿವ ಅಶೋಕ್ ಹಾಗೂ ದೇವದುರ್ಗಕ್ಕೆ ಸೋಮಣ್ಣ ಅವರನ್ನು ನೇಮಕ ಮಾಡುವ ವಿಷಯದಲ್ಲಿ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಿಎಸ್‌ವೈ ವಾದವಾಗಿದೆ. ಹೀಗಾಗಿ ಸಮಾಲೋಚನಾ ಸಭೆಗೆ ಬಿಎಸ್‌ವೈ ಗೈರು ಹಾಜರಾಗಿದ್ದಲ್ಲದೆ ಉಪಚುನಾವಣೆಯಿಂದ ದೂರ ಉಳಿಯುವ ಇಲ್ಲವೆ ತಟಸ್ಥರಾಗಿರುವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.