ಬೆಂಗಳೂರು: ರಾಜ್ಯದಲ್ಲಿ ಜಿಪಂ ಹಾಗೂ ತಾಪಂ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಹೆಬ್ಬಾಳ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ( ಹೆಬ್ಬಾಳ ಕ್ಷೇತ್ರ; ಹೆಚ್ ಎಂ ರೇವಣ್ಣ v/s ಭೈರತಿ ಸುರೇಶ್) ಮುಖ್ಯಮಂತ್ರಿ ಸಿದ್ದರಾಮಯ್ಯ ಭೈರತಿ ಸುರೇಶ್ ಪರವಾಗಿ ನೇರ ಬ್ಯಾಟಿಂಗ್ ಬೀಸಿದ್ದು, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೇ ತೊಡೆ ತಟ್ಟಿದ್ದಾರೆ.
ಭೈರತಿ ನಮ್ಮ ಪಕ್ಷದವರೆ, ಪಕ್ಷಕ್ಕಾಗಿ ಅವರು ಸಾಕಷ್ಟು ದುಡಿದಿದ್ದಾರೆ. ಶಾಸಕಾಂಗ ಪಕ್ಷದ ನಾಯಕನಾಗಿ ನಾನು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಯಾವ ದೃಷ್ಟಿಕೋನದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆಪ್ತರ ಸಭೆ ಕರೆದ ಮಲ್ಲಿಕಾರ್ಜುನ ಖರ್ಗೆ:
ರಾಜ್ಯರಾಜಕೀಯದಲ್ಲಿ ಮತ್ತೆ ಬಿರುಸಿನ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಇದೀಗ ಇಂದು ರಾತ್ರಿ ದೆಹಲಿಯಿಂದ ವಾಪಸ್ ಆಗುವ ಮಲ್ಲಿಕಾರ್ಜುನ ಖರ್ಗೆ ಬುಧವಾರ ಬೆಳಗ್ಗೆ ತಮ್ಮ ನಿವಾಸದಲ್ಲಿ ಆಪ್ತರ ಸಭೆಯನ್ನು ಕರೆದಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಲ್ಲಿಕಾರ್ಜುನ ಖರ್ಗೆಯವರು ರಾಜಕೀಯವಾಗಿ ಸಮರ ಸಾರಿದಂತಾಗಿದೆ.
ಡಿಕೆಶಿ ಬ್ಯಾಟಿಂಗ್ ಬೆನ್ನಲ್ಲೇ ಸಿಎಂ ಹೇಳಿಕೆ:
ಬೈರತಿ ಸುರೇಶ್ ಅವರು ಹೆಚ್ ಎಂ ರೇವಣ್ಣ ಅವರ ಮನೆಯಲ್ಲಿ ಮಾತುಕತೆ ನಡೆಸಿ ವಿನಂತಿ ಫಲಪ್ರದವಾಗದ ಹಿನ್ನೆಲೆಯಲ್ಲಿ ಭೈರತಿ ವಾಪಸ್ ಆಗಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರು ಇಂಧನ ಸಚಿವ ಡಿಕೆಶಿ ಅವರ ಪ್ರತಿಕ್ರಿಯೆ ಕೇಳಿದ್ದರು, ಭೈರತಿ ನಮ್ಮ ಜೊತೆಯೇ ಇದ್ದಾರೆ. ರಾಜಕಾರಣದಲ್ಲಿ ಏನು ಬೇಕಾದರು ಆಗಬಹುದು, ಗೊಂದಲ ಮೂಡಿಸಬಾರದು ಎಂದು ಪರೋಕ್ಷವಾಗಿ ಭೈರತಿ ಪರ ಬ್ಯಾಟಿಂಗ್ ಬೀಸಿದ್ದರು.
-ಉದಯವಾಣಿ