ಅಂಬರೀಶ್ ಬರ್ತಾರೆ ನೋಡ್ತಾ ಇರಿ, ಪ್ರೋಗ್ರಾಮ್‌ನಲ್ಲಿ ಕುಳಿತು ತಮ್ಮ ಅನುಭವಗಳನ್ನ ಹಂಚಿಕೊಳ್ತಾರೆ ಎಂಬ ಸುದ್ದಿ ಹರಡಿತ್ತು. ಅಂಬರೀಶ್ ಏನೆಲ್ಲಾ ಮಾತಾಡಬಹುದು ಎಂದು ಕಾದು ಟಿವಿ ಆನ್ ಮಾಡಿದವರಿಗೆ ಕಂಡಿದ್ದು “ಜೋಗಿ’ ಪ್ರೇಮ್. “ವೀಕೆಂಡ್ ವಿಥ್ ರಮೇಶ್’ನ ಮೊದಲ ಅತಿಥಿಯಾಗಿ ಬಂದ ಪ್ರೇಮ್, ತಮ್ಮ ಅನುಭಗಳನ್ನು ಹಂಚಿಕೊಂಡರು. ಆ ನಂತರವಾದರೂ ಬರಬಹುದೇನೋ ಎಂದು ಜನ ಕಾದಿದ್ದೇ ಕಾದಿದ್ದು. ಆದರೆ, ರಾಜೇಶ್ ಕೃಷ್ಣನ್ ಬಂದರು. ವಿಜಯ್ ಪ್ರಕಾಶ್ ಬಂದರು. ರಂಗಾಯಣ ರಘು, ದೇವರಾಜ್ ಎಲ್ಲರೂ ತಮ್ಮ ಜೀವನದ ಪುಟಗಳನ್ನು ತೆರೆದಿಡುತ್ತಾ ಹೋದರು.
ಆದರೆ, ಅಂಬರೀಶ್ ಮಾತ್ರ “ವೀಕೆಂಡ್ ವಿಥ್ ರಮೇಶ್’ ಕಾರ್ಯಕ್ರಮಕ್ಕೆ ಬರಲೇ ಇಲ್ಲ. ಆ ಬೇಸರದಲ್ಲಿದ್ದವರಿಗೇ ಇದೊಂದು ಗುಡ್ ನ್ಯೂಸ್. ಅಂಬರೀಶ್ ಸದ್ಯದಲ್ಲೇ “ವೀಕೆಂಡ್ ವಿಥ್ ರಮೇಶ್’ ನ ಎರಡನೆಯ ಸೀಸನ್‌ನಲ್ಲಿ ಕಾಣಿಸಿಕೊಂಡು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗಷ್ಟೇ ಅಂಬರೀಶ್ ಭಾಗವಹಿಸಿರುವ ಎಪಿಸೋಡ್‌ನ ಶೂಟಿಂಗ್ ಮುಗಿದಿದೆ. ಅಂಬರೀಶ್ ಅಷ್ಟೇ ಅಲ್ಲ, ಸದ್ಯದಲ್ಲೇ ದರ್ಶನ್ ಸಹ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ದರ್ಶನ್, ಕಾರ್ಯಕ್ರಮದಲ್ಲಿ ಣಿಸಿಕೊಳ್ಳುವುದಕ್ಕೆ ಓಕೆ ಎಂದಿದ್ದು, ಸದ್ಯದಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಈಗಾಗಲೇ “ವೀಕೆಂಡ್ ವಿಥ್ ರಮೇಶ್’ನ ಎರಡನೆಯ ಸೀಸನ್‌ನ 18 ಎಪಿಸೋಡುಗಳ ಚಿತ್ರೀಕರಣ ಮುಗಿದಿದೆ. “ವೀಕೆಂಡ್ ವಿಥ್ ರಮೇಶ್’ನ ಜೊತೆಜೊತೆಗೆ ಜನಶ್ರೀ ಚಾನಲ್‌ಗೆ “ಇಂತಿ ನಿಮ್ಮ ರಮೇಶ್’ ಕಾರ್ಯಕ್ರಮವನ್ನೂ ರಮೇಶ್ ಅರವಿಂದ್ ಅವರು ನಡೆಸಿಕೊಡುತ್ತಿದ್ದಾರೆ. ಇದರ ಮಧ್ಯೆಯೇ “ಪುಷ್ಪಕ ವಿಮಾನ’ ಎಂಬ ಚಿತ್ರದ ಚಿತ್ರೀಕರಣದಲ್ಲೂ ಅವರು ಭಾಗವಹಿಸುತ್ತಿದ್ದಾರೆ. ಇದೆಲ್ಲಾ ಒಂದು ಹಂತಕ್ಕೆ ಬಂದ ನಂತರ ಗಣೇಶ್ ಮತ್ತು ಸಾನ್ವಿ ಅಭಿನಯದ ಹಾಗೂ ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರವನ್ನು ರಮೇಶ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇದೆ.
-ಉದಯವಾಣಿ