
ಉಡುಪಿ: ಉಡುಪಿಯ ಪೇಜಾವರ ಶ್ರೀಗಳ ಪಂಚಮ ಪರ್ಯಾಯಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಉಡುಪಿಯ ಶ್ರೀ ಮಠದ ಪಾರ್ಕಿಂಗ್ ಸ್ಥಳ ಸಮೀಪದಲ್ಲಿರುವ ಆನಂದತೀರ್ಥ ಮಂಟಪದಲ್ಲಿ ಸೋಮವಾರ ಸಂಜೆ ನಡೆಯಿತು.

ಈ ಸಂದರ್ಭದಲ್ಲಿ ದುಬೈನ ಪ್ರಸಿದ್ಧ ಉದ್ಯಮಿ ಹಾಗೂ ‘ಕನ್ನಡಿಗ ವರ್ಲ್ಡ್’ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್ ಅವರನ್ನು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಶ್ರೀಗಳು ಮಂತ್ರಾಕ್ಷತೆ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಚಿತ್ರ ನಿರ್ಮಾಪಕ್, ಉದ್ಯಮಿ ಫ್ರಾಂಕ್ ಫೆರ್ನಾಂಡಿಸ್, ಉದ್ಯಮಿ ಡಾ.ಬಿ.ಆರ್ ಶೆಟ್ಟಿ, ಕಿದಿಯೂರ್ ಹೋಟೆಲಿನ ಮಾಲಿಕ ಭುವನೇಂದ್ರ ಕಿದಿಯೂರು ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.


ಐದು ಮಂದಿಗೆ ಗಿಡಗಳನ್ನು ನೀಡುವ ಮೂಲಕ ಇದೇ ವೇದಿಕೆಯಲ್ಲಿ ಹಸಿರು ಕ್ರಾಂತಿಗೂ ಚಾಲನೆಯನ್ನು ನೀಡಲಾಯಿತು. ಶ್ರೀಗಳು ಗಿಡಗಳನ್ನು ವಿತರಿಸುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಮಂದಿ ಸಾಕ್ಷಿಯಾಗಿದ್ದು ವಿಶೇಷವಾಗಿತ್ತು.

ಪೇಜಾವರ ಮಠದ ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೇಂದ್ರ ಸಚಿವೆ ಉಮಾಭಾರತಿ, ಸಿಂಡಿಕೇಟ್ ಬ್ಯಾಂಕ್ ಡಿಜಿಎಂ ಕೆ.ಟಿ. ರೈ, ಪೆರ್ಣಂಕಿಲ ಹರಿದಾಸ್ ಭಟ್,ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.