ನವದೆಹಲಿ: ತಮಿಳುನಾಡಿನ ಜಲ್ಲಿಕಟ್ಟು ಮತ್ತು ಇತರ ಹೋರಿಗಳ ಓಟಗಳಿಗೆ ಅವಕಾಶ ನೀಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ’ಪೆಟಾ ಇಂಡಿಯಾ’ (ಪೀಪಲ್ ಫಾರ್ ಎಥಿಕಲ್ ಟ್ರೀಟ್ವೆುಂಟ್ ಆಫ್ ಎನಿಮಲ್ಸ್) ಸಂಸ್ಥೆ ಕಟುವಾಗಿ ಟೀಕಿಸಿದೆ. ‘ಕ್ರೌರ್ಯದ ವಿರುದ್ಧದ ರಕ್ಷಣೆಯನ್ನು ತೆಗೆದುಹಾಕಿರುವುದು ರಾಷ್ಟ್ರದ ಮೇಲಿನ ಕಪ್ಪುಚುಕ್ಕೆ’ ಎಂದು ಬಣ್ಣಿಸಿರುವ ಪೆಟಾ ಎತ್ತುಗಳ ರಕ್ಷಣೆಯ ಹೋರಾಟವನ್ನು ಸುಪ್ರೀಂಕೋರ್ಟಿಗೆ ಒಯ್ಯುವುದಾಗಿ ಹೇಳಿದೆ.
ಭಾರತದ ಸುಪ್ರೀಂಕೋರ್ಟ್ ನಿಷೇಧಿಸಿದ್ದರೂ, ಕ್ರೌರ್ಯ ಮೆರೆಯಲು ಅವಕಾಶ ನೀಡುವ ಮೂಲಕ ಜಾನುವಾರುಗಳ ರಕ್ಷಣೆ ಮಾಡುವುದಾಗಿ ಹೇಳಿದ ಅಧಿಕಾರಿಗಳಿಂದಲೇ ಅವುಗಳ ಮೇಲೆ ಕ್ರೌರ್ಯ ನಡೆಸಲು ಅವಕಾಶ ಒದಗಿಸಿದಂತಾಗಿದೆ ಎಂದು ಬಿಜೆಪಿ ಬೆಂಬಲಿಗರೂ ಸೇರಿದಂತೆ ಪ್ರಾಣಿಪ್ರಿಯರಿಂದ ತಮಗೆ ವ್ಯಾಪಕ ಕರೆಗಳು ಬರುತ್ತಿವೆ ಎಂದು ಪೆಟಾ ತಿಳಿಸಿದೆ.
ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಯ ಅನುಮತಿ ಇಲ್ಲದೆ ಎತ್ತುಗಳನ್ನು ಜಲ್ಲಿಕಟ್ಟು, ಓಟದಂತಹ ಕ್ರೀಡೆಗಳಲ್ಲಿ ಬಳಸುವುದನ್ನು ನಿಷೇಧಿಸಿದ 2011ರ ಜುಲೈ 11ರ ಪ್ರಕಟಣೆಯನ್ನು ಮಾರ್ಪಡಿಸಿ ಎತ್ತುಗಳನ್ನು ಜಲ್ಲಿಕಟ್ಟು, ಓಟಗಳಲ್ಲಿ ಬಳಸಲು ಅವಕಾಶ ನೀಡಲು ಸಂಬಂಧಪಟ್ಟ ಸಚಿವಾಲಯಕ್ಕೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ. ಇಂತಹ ಕ್ರೀಡೆಗಳಲ್ಲಿ ಕ್ರೌರ್ಯ ಮನೆಮಾಡಿದೆ. ಎತ್ತುಗಳ ಅಂಗರಚನೆ ಇಂತಹ ಓಟಗಳಿಗೆ ಸೂಕ್ತವಾದುದಲ್ಲ. ಈ ಕ್ರೀಡೆಗಳಲ್ಲಿ ಈ ಪ್ರಾಣಿಗಳು ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವುಗಳನ್ನು ಅನಗತ್ಯ ನೋವಿಗೆ ಗುರಿಪಡಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದ್ದನ್ನು ಪೆಟಾ ಉಲ್ಲೇಖಿಸಿದೆ.