ಕರ್ನಾಟಕ

ಶಿವಮೊಗ್ಗ ಸೋಲು ಬಿಎಸ್‌ವೈಗೆ ಗೊತ್ತಿತ್ತೆ?

Pinterest LinkedIn Tumblr

BS-Yadiyoorappa-1-650ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಹಾಲಿ ಸದಸ್ಯ, ಬಿಜೆಪಿ ಅಭ್ಯರ್ಥಿ ಆರ್‌.ಕೆ.ಸಿದ್ದರಾಮಣ್ಣ ಅವರ ಸೋಲು ಪಕ್ಷದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮೊದಲೇ ಗೊತ್ತಿತ್ತೇ? ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೂ ಮುನ್ನವೇ ಸಿದ್ದರಾಮಣ್ಣ ಅವರಿಗೆ ಈ ಬಾರಿ ಟಿಕೆಟ್‌ ನೀಡುವುದು ಬೇಡ ಎಂದು ಯಡಿಯೂರಪ್ಪ ಕಡ್ಡಿ ಮುರಿದಂತೆ ಪಕ್ಷದ ಇತರ ನಾಯಕರಿಗೆ ಹೇಳಿದ್ದರು. ಆದರೂ, ಪಕ್ಷದ ಇತರ ನಾಯಕರು ಯಡಿಯೂರಪ್ಪ ಅವರ ಮಾತನ್ನು ಲೆಕ್ಕಿಸದೆ ಸಿದ್ದರಾಮಣ್ಣ ಅವರಿಗೇ ಟಿಕೆಟ್‌ ನೀಡಿ ಇದೀಗ ಸೋಲಿಗೂ ಕಾರಣರಾದರು ಎಂಬ ಮಾತು ಪಕ್ಷದ ಪಾಳೆಯದಿಂದಲೇ ಕೇಳಿಬಂದಿದೆ.

ಟಿಕೆಟ್‌ ಹಂಚಿಕೆಯಲ್ಲಿ ತಮ್ಮ ಮಾತನ್ನು ಲೆಕ್ಕಿಸಲಿಲ್ಲ ಎಂಬ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಸಿದ್ದರಾಮಣ್ಣ ಪರ ಪ್ರಚಾರವನ್ನೂ ನಡೆಸಲಿಲ್ಲ. ಕೊನೆಯ ದಿನ ಪಕ್ಷದ ಮುಖಂಡರ ಒತ್ತಾಯಕ್ಕೆ ಮಣಿದು ಕಾಟಾಚಾರಕ್ಕೆ ಎಂಬಂತೆ ಕೇವಲ ಅರ್ಧ ದಿನ ಮಾತ್ರ ಶಿಕಾರಿಪುರ ಮತ್ತು ಹೊನ್ನಾಳಿ ತಾಲೂಕಿನಲ್ಲಿ ಪ್ರಚಾರ ನಡೆಸಿದ್ದರು.

ವಾಸ್ತವವಾಗಿ ಯಡಿಯೂರಪ್ಪ ಅವರು ಹಾಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್‌ ಅವರಿಗೆ ಟಿಕೆಟ್‌ ನೀಡುವಂತೆ ಶಿಫಾರಸು ಮಾಡಿದ್ದರು. ಆಯನೂರು ಅವರ ಅವಧಿ ಬರುವ ಜೂನ್‌ಗೆ ಮುಗಿಯಲಿದೆ. ಹೀಗಾಗಿ ಈಗಲೇ ಅವರನ್ನು ವಿಧಾನಪರಿಷತ್ತಿಗೆ ಅಭ್ಯರ್ಥಿಯನ್ನಾಗಿಸುವುದು ಸೂಕ್ತ ಎಂಬ ಮಾತನ್ನು ಪಕ್ಷದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆಯಲ್ಲಿ ಪ್ರಸ್ತಾಪಿಸಿದ್ದರು ಎನ್ನಲಾಗಿದೆ.

ಆದರೆ, ಆಯನೂರು ಪರಿಷತ್ತಿಗೆ ಪ್ರವೇಶಿಸುವುದು ಶಿವಮೊಗ್ಗ ಜಿಲ್ಲೆಯ ಇತರ ನಾಯಕರಾದ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ, ಹಾಲಿ ವಿಧಾನಪರಿಷತ್‌ ಸದಸ್ಯ ಭಾನುಪ್ರಕಾಶ್‌ ಮೊದಲಾದವರಿಗೆ ಇಷ್ಟವಿರಲಿಲ್ಲ. ಹೀಗಾಗಿ ಸಿದ್ದರಾಮಣ್ಣ ಅವರಿಗೇ ಟಿಕೆಟ್‌ ನೀಡಬೇಕು ಎಂದು ಪಟ್ಟು ಹಿಡಿದರು. ಯಡಿಯೂರಪ್ಪ ಮಾತನ್ನು ಕಡೆಗಣಿಸಿ ಸ್ಥಳೀಯ ಇತರ ಮುಖಂಡರು ಹಿಡಿದ ಪಟ್ಟಿಗೆ ರಾಜ್ಯ ಘಟಕದ ಇತರ ನಾಯಕರು ಸೈ ಎಂದರು. ಸಿದ್ದರಾಮಣ್ಣ ಅವರಿಗೇ ಟಿಕೆಟ್‌ ನೀಡಿದರು.

ಬಿಎಸ್‌ವೈ ಪ್ರಚಾರ ಮಾಡಿದ ಕಡೆ ಮಾತ್ರ ಬಿಜೆಪಿಗೆ ಲೀಡ್‌
ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರೂ ಯಡಿಯೂರಪ್ಪ ಒಲ್ಲದ ಮನಸ್ಸಿನಿಂದಲೇ ಪ್ರಚಾರ ನಡೆಸಿದ ಶಿಕಾರಿಪುರ ಮತ್ತು ಹೊನ್ನಾಳಿ ತಾಲೂಕುಗಳಲ್ಲಿ ಮಾತ್ರ ಹೆಚ್ಚಿನ ಮತ ಗಳಿಸಿದ್ದಾರೆ. ಹಾಗಾದರೆ ಯಡಿಯೂರಪ್ಪ ಮನಸ್ಸು ಮಾಡಿ ಕ್ಷೇತ್ರದಾದ್ಯಂತ ಭರದ ಪ್ರಚಾರ ನಡೆಸಿದ್ದರೆ ಸಿದ್ದರಾಮಣ್ಣ ಗೆಲ್ಲುತ್ತಿದ್ದರು ಎಂಬ ತರ್ಕವೂ ಪಕ್ಷದಲ್ಲಿ ನಡೆಯುತ್ತಿದೆ. ಒಟ್ಟಾರೆ, ಶಿವಮೊಗ್ಗದ ಮಟ್ಟಿಗೆ ಯಡಿಯೂರಪ್ಪ ಅವರು ಅಂದುಕೊಂಡಂತೆಯೇ ಆಗಿದೆ.
-ಉದಯವಾಣಿ

Write A Comment