ನವದೆಹಲಿ, ಡಿ.17-ನ್ಯಾಷನಲ್ ಹೆರಾಲ್ಡ್ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಉಪಾಧ್ಯಕ್ಷ (ಸೋನಿಯಾಪುತ್ರ) ರಾಹುಲ್ ಗಾಂಧಿ ಅವರು ಡಿ.19 ರಂದು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲಿದ್ದಾರೆ.
ಆದರೆ, ಇಬ್ಬರೂ ನಾಯಕರು ಜಾಮೀನು ಪಡೆಯುವ ಉದ್ದೇಶ ಹೊಂದಿಲ್ಲ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ. ಸದ್ಯ ಚಾಲ್ತಿಯಲ್ಲಿಲ್ಲದ ನ್ಯಾಷನಲ್ ಹೆರಾಲ್ಡ್ ವೃತ್ತಪತ್ರಿಕೆ ಆಸ್ತಿ ಖರೀದಿ ಹಾಗೂ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್ ಪಕ್ಷದ ಹಿರಿಯ ನಾಯಕರಿಬ್ಬರಿಗೆ ಸಮನ್ಸ್ ನೀಡಿರುವುದನ್ನು ಕಾಂಗ್ರೆಸ್ ಬಲವಾಗಿ ವಿರೋಧಿಸಿತ್ತು. ಅಷ್ಟೇ ಅಲ್ಲದೆ ನಿರೀಕ್ಷಣಾ ಜಾಮೀನು ಪಡೆಯುವಂತೆಯೂ ಒತ್ತಾಯಿಸಿತ್ತು.
ಆದರೆ, ಈಗ ಉಭಯ ನಾಯಕರು ಕಾನೂನು ಪ್ರಕಾರವೇ ನ್ಯಾಯಾಲಯಕ್ಕೆ ಹಾಜರಾಗಲು ಸಿದ್ಧರಾಗಿದ್ದು ಜಾಮೀನು ಕೋರುವ ಅಗತ್ಯವಿಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಆದರೆ, ಪಕ್ಷದ ಮೂಲಗಳು ಇನ್ನೂ ಕೂಡ ಇದನ್ನು ದೃಢಪಡಿಸಿಲ್ಲ.