ರಾಷ್ಟ್ರೀಯ

ಮೀಸಲಾತಿ ರದ್ದತಿಗೆ ಆರ್ ಎಸ್ ಎಸ್ ಒಲವಿಲ್ಲ: ಭಾಗವತ್

Pinterest LinkedIn Tumblr

Bhagwat1-PTI

ನಾಗಪುರ್: ಮೀಸಲಾತಿಯನ್ನು ಸಮಗ್ರ ಪರಿಶೀಲನೆಗೆ ಒಳಪಡಿಸಬೇಕು ಎಂದು ತಾವು ನೀಡಿದ್ದ ಹೇಳಿಕೆಗೆ ಯು-ಟರ್ನ್ ಹೊಡೆದಿರುವ ಆರ್ ಎಸ್ ಎಸ್ ಅಧ್ಯಕ್ಷ ಮೋಹನ್ ಭಾಗವತ್, ಎಲ್ಲಿಯವರೆಗೂ ದೇಶದಲ್ಲಿ ಸಾಮಾಜಿಕ ಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರೆಯಲಿದೆ ಮತ್ತು ಮೀಸಲಾತಿ ರದ್ದತಿಗೆ ಸಂಘದ ಒಲವಿಲ್ಲ ಎಂದಿದ್ದಾರೆ.

“ಮೀಸಲಾತಿಯನ್ನು ರದ್ದು ಪಡಿಸುವ ಪ್ರಶ್ನೆ ಆರ್ ಎಸ್ ಎಸ್ ಗೆ ಬಂದಿಲ್ಲ ಎಂಬುದು ಧೃಢ ಅಭಿಪ್ರಾಯ. ಎಲ್ಲಿಯವರೆಗೂ ದೇಶದಲ್ಲಿ ಸಾಮಾಜಿಕ ಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರೆಯಬೇಕು” ಎಂದು ಕಳೆದ ಸಂಜೆ ‘ಸಾಮಾಜಿಕ ಅಸಮಾನತೆ’ಯ ಮೇಲೆ ನೀಡುತ್ತಿದ್ದ ಉಪನ್ಯಾಸದ ವೇಳೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಬಿಹಾರ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಮಿಸಲಾತಿ ವ್ಯವಸ್ಥೆ ಪರಿಷ್ಕರಣೆಗೆ ಒಳಪಡಬೇಕು ಎಂದು ಮೋಹನ್ ಭಾಗವತ್ ಹೇಳಿದ್ದು ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು ಹಾಗೂ ಬಿಹಾರದಲ್ಲಿ ಬಿಜೆಪಿ ಸೋಲಿಗೆ ಈ ಹೇಳಿಕೆ ಪ್ರಮುಖ ಕಾರಣ ಎಂದೆ ಬಣ್ಣಿಸಲಾಗಿತ್ತು.

‘ಸಾಮಾಜಿಕ ಒಳಗೊಳ್ಳುವಿಕೆ’ಯ ಬಗ್ಗೆ ಮಾತನಾಡಿರುವ ಆರ್ ಎಸ್ ಎಸ್ ಅಧ್ಯಕ್ಷ ಇದು ಸ್ವಂತದಲ್ಲಿ ಪ್ರಾರಂಭವಾಗಿ ನಂತರ ಕುಟುಂಬ ಹಾಗೂ ಸಮಾಜಕ್ಕೆ ಮುಂದುವರೆಯಬೇಕು. “ಇದು ಸಮಾಜದಲ್ಲಿನ ವೈವಿಧ್ಯತೆಯನ್ನು ಗೌರವಿಸುವುದರ ಮೂಲಕ ನಡೆಯಬೇಕು ಆದರೆ ಹಿಂದೂ ಧರ್ಮದ ತಾತ್ವಿಕ ನೆಲೆಗಟ್ಟಿನಲ್ಲೇ ಸಾಗಬೇಕು” ಎಂದಿದ್ದಾರೆ.

‘ಸಾಮಾಜಿಕ ಸೌಹಾರ್ದತೆ ಮತ್ತು ಸಮಗ್ರತೆ’ ಬಗ್ಗೆ ಕೂಡ ಮಾತನಾಡಿರುವ ಭಾಗವತ್ “ಯಾವುದೇ ಮತಧರ್ಮ, ಸಮುದಾಯ, ಸಮಾಜ ಸುಧಾರಕ ಅಥವಾ ಸಂತನಾಗಲೀ ಮನುಷ್ಯರ ನಡುವೆ ಅಸಮಾನತೆಯನ್ನು ಬೋಧಿಸಿಲ್ಲ. ಯಾವುದೇ ಸಮುದಾಯದ ಮೂಲ ಉಗಮದಲ್ಲಿ ಸಮಾನತೆಯೇ ಧ್ಯೇಯವಾಗಿರುವುದು ಆದರೆ ನಂತರ ಜಾತಿಗಳಾಗಿ ಮತ್ತು ವರ್ಗಗಳಾಗಿ ಒಡೆಯಲಾಗಿದೆ. ಜನರ ವರ್ತನೆಯಿಂದ ಅಸಮಾನತೆ ಹುಟ್ಟಿದೆ” ಎಂದು ಕೂಡ ಅವರು ಹೇಳಿದ್ದಾರೆ.

ಸಾಮಾಜಿಕ ಅಸಮಾನತೆಯ ಬಗ್ಗೆ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಲು ಕೂಡ ಭಾಗವತ್ ಕರೆ ಕೊಟ್ಟಿದಾರೆ.

Write A Comment