ನವದೆಹಲಿ: ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಾಲಿವುಡ್ ನ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ಇಸ್ಲಾಂ ವಿರೋಧಿ ಅಂಶಗಳಿರುವುದರಿಂದ ಪಾಕಿಸ್ತಾನದಲ್ಲಿ ಬಿಡುಗಡೆಗೆ ನಿಷೇಧ ಹೇರಲಾಗಿದೆ ಎಂದು ಪಾಕ್ ಸೆನ್ಸಾರ್ ಮಂಡಳಿ ತಿಳಿಸಿದೆ. ಆದರೆ ಶಾರುಕ್ ಖಾನ್, ಕಾಜೋಲ್ ಅಭಿನಯದ ದಿಲ್ ವಾಲೆ ಬಿಡುಗಡೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.
17ನೇ ಶತಮಾನದ ಮರಾಠ ಪೇಶ್ವೆಯ ಕಥಾಹಂದರವನ್ನು ಹೊಂದಿರುವ ಬಾಜಿರಾವ್ ಮಸ್ತಾನಿ ಸಿನಿಮಾದಲ್ಲಿ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇಸ್ಲಾಂ ವಿರೋಧಿ ಅಂಶಗಳಿರುವುದರಿಂದ ಚಿತ್ರ ಬಿಡುಗಡೆಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ನೀಡಲು ಪಾಕ್ ಸೆನ್ಸಾರ್ ಮಂಡಳಿ ನಿರಾಕರಿಸಿದೆ. ಹಾಗಾಗಿ ನಾಳೆ ಬಾಜಿರಾವ್ ಸಿನಿಮಾ ಪಾಕ್ ನಲ್ಲಿ ಬಿಡುಗಡೆಯಾಗಲು ತಡೆ ಬಿದ್ದಂತಾಗಿದೆ. ಉಳಿದಂತೆ ಬಾಲಿವುಡ್ ನ ನಿರೀಕ್ಷಿತ ಬಾಜಿರಾವ್ ಸಿನಿಮಾ ದೇಶ, ವಿದೇಶಗಳಲ್ಲಿ ಬಿಡುಗಡೆಯಾಗಲಿದೆ.
ಇನ್ನು ಶಾರುಕ್ ಖಾನ್, ಕಾಜೋಲ್ ಅಭಿನಯದ ಬಿಗ್ ಬಜೆಟ್ ಸಿನಿಮಾ ಕೂಡಾ ನಾಳೆ ದೇಶ, ವಿದೇಶಗಳಲ್ಲಿ ರಿಲೀಸ್ ಆಗಲಿದೆ. ಪಾಕಿಸ್ತಾನದಲ್ಲಿಯೂ ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ. ಉತ್ತಮ ಚಿತ್ರ ಬಿಡುಗಡೆಗೆ ಪಾಕಿಸ್ತಾನದಲ್ಲಿ ಅನುಮತಿ ನೀಡಲಾಗಿದೆ ಎಂದು ಪಾಕ್ ಸೆನ್ಸಾರ್ ಬೋರ್ಡ್ ಹೇಳಿದೆ.
-ಉದಯವಾಣಿ