ಕನ್ನಡ ವಾರ್ತೆಗಳು

ಹನೀಫ್ ಕೊಲೆಯತ್ನ ಪ್ರಕರಣ : ಆರು ಆರೋಪಿಗಳಿಗೆ ನ್ಯಾಯಾಂಗ ಬಂಧನ : ಒರ್ವ ಆರೋಪಿಗಾಗಿ ಶೋಧ

Pinterest LinkedIn Tumblr

Mada_haneef_photo

ಬಂಟ್ವಾಳ, ಡಿ. 14: ತಾಲೂಕಿನ ರಂಗಿಪೇಟೆ ಸಮೀಪದ ಮಾರಿಪಳ್ಳದ ಕಟ್ಟೆ ಅಂಗಡಿ ಬಳಿ ಬುಧವಾರ ನಡೆದ ರೌಡಿ ಶೀಟರ್ ಹನೀಫ್ ಯಾನೆ ಮಾದ ಹನೀಫ್ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಸಿ ಒಟ್ಟು ಏಳು ಮಂದಿ ಆರೋಪಿಗಳ ಪೈಕಿ ಆರು ಮಂದಿಯನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ರವಿವಾರ ಇಲ್ಲಿನ ಬಿ.ಸಿ.ರೋಡ್ ನ್ಯಾಯಾಧೀಶರ ಮನೆ ಎದುರು ಹಾಜರು ಪಡಿಸಿದ್ದಾರೆ.

ಆರೋಪಿಗಳನ್ನು ಸ್ಥಳೀಯ ಸುಜೀರು ನಿವಾಸಿಗಳಾದ ಖಲಂದರ್ ಶಾಫಿ, ಅನ್ವರ್ ಶಾಹಿದ್, ಮಾರಿಪಳ್ಳ ನಿವಾಸಿ ಸಿದ್ದೀಕ್, ತುಂಬೆ ನಿವಾಸಿಗಳಾದ ಅರಾತ್, ನಾಸಿರ್ ಹುಸೈನ್, ಅಡ್ಯಾರು ನಿವಾಸಿ ಇಮ್ರಾನ್ ಎಂದು ಗುರುತಿಸಲಾಗಿದ್ದು, ಇವರಿಗೆ ಡಿ. 26ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನೋರ್ವ ಆರೋಪಿ ಕಾರು ಚಾಲಕ ಸಂಶುದ್ದೀನ್ ತಲೆಮರೆಸಿಕೊಂಡಿದ್ದಾನೆ. ಹನೀಫ್ ಮೇಲೆ ದಾಳಿ ನಡೆಸಿದ್ದ ಯುವಕರ ಗುಂಪು ಬಳಿಕ ಪರಾರಿಯಾಗಿತ್ತು. ಕೊಲೆಯತ್ನದ ಮರುದಿನ ಬಿ.ಸಿ.ರೋಡಿನ ಗಾಣದಪಡ್ಪು ಗ್ಯಾರೇಜೊಂದರ ಬಳಿ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪತ್ತೆ ಹಚ್ಚಿದ ಪೊಲೀಸರು, ಕಾರಿನ ಸಮೇತ ಕಾರಿನಲ್ಲಿದ್ದ 2 ತಲವಾರುಗಳನ್ನು ವಶಪಡಿಸಿದ್ದರು. ಕಾರಿನ ದಾಖಲೆ ಪತ್ರಗಳನ್ನು ಕಲೆ ಹಾಕಿದ ಗ್ರಾಮಾಂತರ ಪೊಲೀಸರು ಆರೋಪಿಗಳ ಮಾಹಿತಿಯನ್ನು ಸಂಗ್ರಹಿಸಿದ್ದರು.

ಈ ಆಧಾರದಲ್ಲಿ ಕೃತ್ಯದಲ್ಲಿದ್ದ 6 ಮಂದಿಯನ್ನು ಬಂಸಲಾಗಿದೆ. ಇನ್ನೋರ್ವ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಪ್ರಕರಣದ ಹಿನ್ನೆಲೆಯಲ್ಲಿ ಖಚಿತ ಪಡಿಸಿದ್ದಾರೆ. 2014, ಜೂ.21ರಂದು ಕೊಡ್ಮಾಣ್, ನೆತ್ತರಕೆರೆ ಸಮೀಪ ನಡೆದ ಆಟೊ ಚಾಲಕ ಮುಹಮ್ಮದ್ ರಿಯಾಯಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಾದ ಹನೀಫ್ ಬೆಳಗಾವಿ ಜೈಲು ಸೇರಿದ್ದು, ಇತ್ತೀಚೆಗೆ ಹೊರಗೆ ಬಂದಿದ್ದ. ಬಂಧಿತ ಆರೋಪಿಗಳು ರಿಯಾಯಿ ಕೊಲೆಗೆ ಪ್ರತೀಕಾರವಾಗಿ ಹನೀಫ್ ಮೇಲೆ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದರು ಎಂದು ಪೊಲೀಸ್ ಮೂಲ ತಿಳಿಸಿದೆ.

ಕೊಲೆಯತ್ನಕ್ಕೆ ಹಳೆಯ ದ್ವೇಷ ಕಾರಣವಾಗಿದ್ದು, ಕಾರು ಚಾಲಕ ಸಂಶುದ್ದೀನ್ ಪತ್ತೆಯಾದ ಬಳಿಕ ಮತ್ತಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಬಂಟ್ವಾಳ ಇನ್ಸ್‌ಪೆಕ್ಟರ್ ಕೆ.ಯು.ಬೆಳ್ಳಿಯಪ್ಪ ತಿಳಿಸಿದ್ದಾರೆ.

Write A Comment