
ಮಂಗಳೂರು, ಡಿ. 14: ಭಾಷೆ ಎಂಬುದು ಆತ್ಮದ ಅಭಿವ್ಯಕ್ತಿಯಾಗಿದ್ದು, ಪ್ರಾದೇಶಿಕ ಭಾಷೆಗಳು ಉಳಿದಾಗ ಮಾತ್ರವೇ ಸಮುದಾಯಗಳ ಸಂಸ್ಕೃತಿ, ಆಚಾರ ವಿಚಾರಗಳಲ್ಲಿನ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಅವರು ಇಂದು ನಗರದ ಪುರಭವದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ಬ್ಯಾರಿ ಸಾಕ್ಷಚಿತ್ರ, ಕವನಸಂಕಲನ ಬಿಡುಗಡೆ ಮತ್ತು ದಫ್ ಪರಿಕರ ಮತ್ತು ಸಮವಸ್ತ್ರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಗಳನ್ನು ಹುಡುಕಿ ಕಟ್ಟಿ ಬೆಳೆಸುವ ಅನಿವಾರ್ಯತೆ ಇದೆ. ಇಂಗ್ಲಿಷ್ ಭಾಷೆ ಇಂದು ತನ್ನ ಶಬ್ಧಗಳ ಭಂಡಾರದಿಂದ ಪ್ರಭಾವವನ್ನು ಬೀರುವ ಮೂಲಕ ಪ್ರಾದೇಶಿಕ ಭಾಷೆಗಳು ಅಪಾಯವನ್ನು ಎದುರಿಸುತ್ತಿದ್ದು, ಬ್ಯಾರಿ ಭಾಷೆಯೂ ಆ ಅಪಾಯ ತಪ್ಪಿದ್ದಲ್ಲ. ಹಾಗಾಗಿ ನಮ್ಮ ತಾಯಿ ಭಾಷೆಯನ್ನು ಪ್ರೀತಿಯ ವಾಹಕವಾಗಿ ಪ್ರಜ್ಞಾಪೂರ್ವಕವಾಗಿ ನಮ್ಮದಾಗಿಸಿಕೊಂಡು ಬೆಳೆಸಬೇಕು ಎಂದು ಅವರು ಬ್ಯಾರಿ ಸಮುದಾಯದವರಿಗೆ ಕಿವಿಮಾತು ನೀಡಿದರು.
ಭಾಷೆ ಕೇವಲ ಸದ್ದು ಮಾತ್ರ ಅಲ್ಲ, ಅದು ಪ್ರಾಕೃತಿಕ ಅದ್ಭುತ. ಇಂದಿನ ವೈಜ್ಞಾನಿಕ ಸಾಧನಗಳನ್ನು ರಚನಾತ್ಮಕವಾಗಿ ಬಳಸಿಕೊಂಡು ಭಾಷೆಯನ್ನು ಉಳಿಸಿಕೊಳ್ಳಬೇಕು. ಇತರ ಭಾಷೆಗಳನ್ನು ಕಲಿಯುವ ಜತೆ ನಮ್ಮ ಭಾಷೆಯನ್ನು ನಮ್ಮದಾಗಿಸಿಕೊಳ್ಳಬೇಕು. ಭಾಷೆಯ ಅಸ್ಮಿತೆ, ಸೂಕ್ಷ್ಮತೆಗಳು ಕಳೆದು ಹೋಗದಂತೆ ಕಾಪಾಡಬೇಕು ಎಂದವರು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಜೆ.ಆರ್. ಲೋಬೋ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಯಾರಿ ಕನ್ನಡ ಹಾಗೂ ಆಂಗ್ಲ ಭಾಷೆಯ ನಿಘಂಟನ್ನು ಅಕಾಡೆಮಿ ವತಿಯಿಂದ ತಯಾರಿಸಲಾಗುತ್ತಿದ್ದು, ೪೦ ಮಂದಿಗೆ ಫೆಲೋಶಿಪ್ ನೀಡಲಾಗಿದೆ. ಇಂದು ರಾಜ್ಯದ ೪೦ ತಂಡಗಳಿಗೆ ದಫ್ ಪರಿಕರ ಹಾಗೂ ಸಮವಸ್ತ್ರ ವಿತರಿಸಲಾಗಿದೆ. ಅಕಾಡೆಮಿ ವತಿಯಿಂದ ಬ್ಯಾರಿ ಭಾಷೆ ಹಾಗೂ ಸಂಸ್ಕೃತಿ ಉಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸಾಕ್ಷ ಚಿತ್ರಗಳ ನಿರ್ದೇಶಕ , ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಮಾತನಾಡಿ, ೩೦ ವರ್ಷಗಳ ಹಿಂದೆ ಬ್ಯಾರಿ ಎಂಬ ಪದದ ಬಗ್ಗೆ ಆಕ್ಷೇಪ, ವಿರೋಧ, ಮುಜಗರ ಪಡುತ್ತಿದ್ದ ಸಮುದಾಯದ ಜನರಿಂದು ಬ್ಯಾರಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು. ಈ ಸಂದರ್ಭ ರಾಜ್ಯದ ೪೦ ತಂಡಗಳಿಗೆ ದಫ್ ಪರಿಕರ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು.
ಸಾಹಿತಿ ಪ್ರೊ. ಎ.ವಿ. ನಾವಡ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ, ಸೆಂಟ್ರಲ್ ಮುಸ್ಲಿಂ ಕಮಿಟಿ ಅಧ್ಯಕ್ಷ ಮುಹಮ್ಮದ್ ಮಸೂದ್, ಚಿಕ್ಕಮಗಳೂರು ಜಿಲ್ಲಾ ಬ್ಯಾರಿಗಳ ಒಕ್ಕೂಟದ ಅಧ್ಯಕ್ಷ ಕೆ. ಮುಹಮ್ಮದ್, ಅಖಿಲ ಭಾರತ ಬ್ಯಾರಿ ಪರಿಷತ್ ಗೌರವಾಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ, ಅಹಿಂದ ಜನ ಚಳವಳಿ ಅಧ್ಯಕ, ವಾಸುದೇವ ಬೋಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಹಾಗೂ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಬ್ಯಾರಿ ಹಾಡುಗಳ ನಿರ್ವಹಣೆಯನ್ನು ಲತೀಫ್ ನೇರಳಕಟ್ಟೆ ನೆರವೇರಿಸಿದರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ಅಬ್ಬಾಸ್ ಕಿರುಗುಂದ ವಂದಿಸಿದರು.