ಕರ್ನಾಟಕ

ಮದುವೆಗೊಪ್ಪದ ಅತ್ತೆ ಮುಖಕ್ಕೆ ಬ್ಲೇಡ್ ಹಾಕಿದ ಅಳಿಯ!

Pinterest LinkedIn Tumblr

attack

ಬೆಂಗಳೂರು: ತನ್ನನ್ನು ಮದುವೆಯಾಗಲು ನಿರಾಕರಿಸಿದ ಅತ್ತೆಯ ಮುಖಕ್ಕೆ ಅಳಿಯ ಬ್ಲೇಡ್‌ನಿಂದ ಹಲ್ಲೆ ನಡೆಸಿರುವ ಘಟನೆ ವಿಜಯನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ರಂಗಲಕ್ಷ್ಮಿ (25) ಹಲ್ಲೆಗೊಳಗಾಗಿದ್ದು, ಆರೋಪಿ ನೀಲಕಂಠ (21) ಘಟನೆ ನಂತರ ತಲೆಮರೆಸಿಕೊಂಡಿದ್ದಾನೆ.

ಹೊಸದುರ್ಗದವರಾದ ರಂಗಲಕ್ಷ್ಮಿ, 4 ವರ್ಷದ ಹಿಂದೆ ಖಾಸಗಿ ಕಂಪೆನಿ ಉದ್ಯೋಗಿ ಮಧು ಎಂಬಾತನನ್ನು ಮದುವೆಯಾಗಿದ್ದರು.

ಮದುವೆ ಬಳಿಕ ನಗರದಲ್ಲೇ ವಾಸವಾಗಿದ್ದ ದಂಪತಿ ಮಧ್ಯೆ ಕಲಹ ಉಂಟಾಗಿದ್ದರಿಂದ, ಲಕ್ಷ್ಮಿ ಅವರು ವರ್ಷದ ಹಿಂದೆ ಪತಿಯನ್ನು ತೊರೆದಿದ್ದರು.

ನಂತರ ಸುಬ್ಬಣ್ಣ ಗಾರ್ಡನ್‌ನ ಪೇಯಿಂಗ್ ಗೆಸ್ಟ್‌ನಲ್ಲಿ (ಪಿಜಿ) ಉಳಿದುಕೊಂಡಿದ್ದ ಅವರು, ವಿಜಯನಗರದ ವಾಹನದ ಶೋರೂಂನಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದರು.

ಆಗಾಗ ಊರಿಗೆ ಹೋಗಿ ಬರುತ್ತಿದ್ದ ಅವರನ್ನು ಅಳಿಯ (ಅಕ್ಕನ ಗಂಡನ ತಂಗಿ ಮಗ) ನೀಲಕಂಠ ಬಂದು ಮಾತನಾಡಿಸಿಕೊಂಡು ಹೋಗುತ್ತಿದ್ದ. ಊರಿನಲ್ಲಿ ವ್ಯವಸಾಯ ಮಾಡಿಕೊಂಡಿದ್ದ ಈತ, ‘ಪತಿಯಿಂದ ಪ್ರತ್ಯೇಕವಾಗಿರುವ ನಿನ್ನನ್ನು ನಾನು ಮದುವೆಯಾಗುತ್ತೇನೆ’ ಎಂದು ಹಿಂದೆ ಬಿದ್ದಿದ್ದ.

ಆಗ ಲಕ್ಷ್ಮಿ, ‘ನಾನು ನಿನಗೆ ಅತ್ತೆಯಾಗಬೇಕು. ನಮ್ಮ ಸಂಬಂಧ ಮದುವೆಗೆ ಸರಿ ಹೋಗುವುದಿಲ್ಲ. ಅಲ್ಲದೆ, ನೀನು ವಯಸ್ಸಿನಲ್ಲಿ ನನಗಿಂತ ಚಿಕ್ಕವನು’ ಎಂದು ಮದುವೆಯಾಗಲು ನಿರಾಕರಿಸಿದ್ದರು.

ಆದರೂ ಬೆನ್ನ ಬಿಡದೆ ಆತ, ಮೊಬೈಲ್‌ಗೆ ಕರೆ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಪಿ.ಜಿ ವಿಳಾಸ ತಿಳಿದುಕೊಂಡಿದ್ದ ಆರೋಪಿ, ಆಗಾಗ ಬಂದು ಭೇಟಿ ಮಾಡುತ್ತಿದ್ದ.

ಘಟನೆಗೆ ಮೂರ್ನಾಲ್ಕು ದಿನದ ಹಿಂದೆಯೂ ಕರೆ ಮಾಡಿದ್ದ ಆತ, ನನ್ನನ್ನು ಮದುವೆಯಾಗಲೇ ಬೇಕು ಎಂದು ಹಟ ಹಿಡಿದಿದ್ದ.
ಆತನ ಕಿರುಕುಳದಿಂದ ಬೇಸತ್ತಿದ್ದ ಅವರು, ‘ಇನ್ನು ಮುಂದೆ ಮೊಬೈಲ್‌ಗೆ ಕರೆ ಮಾಡಿ ಹಿಂಸೆ ಕೊಡಬೇಡ. ನನ್ನ ಪಾಡಿಗೆ ಬಿಟ್ಟುಬಿಡು’ ಎಂದು ಎಂದಿದ್ದರು. ಆಗ ಒಂದೆರಡು ದಿನ ಸುಮ್ಮನಾಗಿದ್ದ.

ಮಾತನಾಡುವುದಿದೆ ಎಂದು ಕರೆದ: ಬುಧವಾರ ಸಂಜೆ 7.30ರ ಸುಮಾರಿಗೆ ಪಿ.ಜಿ ಬಳಿ ಬಂದಿದ್ದ ಆತ, ಲಕ್ಷ್ಮಿ ಅವರಿಗೆ ಕರೆ ಮಾಡಿ ಸ್ವಲ್ಪ ಮಾತನಾಡಬೇಕಿದೆ ಎಂದು ಹೇಳಿ ಹೊರಕ್ಕೆ ಕರೆದಿದ್ದಾನೆ.

ಹೊರಬಂದ ಅವರ ಜತೆ ಮಾತನಾಡುತ್ತ ಮತ್ತೆ ಮದುವೆಯಾಗುವಂತೆ ಕೋರಿದ್ದಾನೆ. ಇದರಿಂದ ಕೋಪಗೊಂಡ ಅವರು, ಸ್ಥಳದಿಂದ ಹೊರಟು ಹೋಗು ಎಂದು ಪಿ.ಜಿಗೆ ಹೊರಡಲು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಆರೋಪಿ, ತನ್ನೊಂದಿಗೆ ತಂದಿದ್ದ ಬ್ಲೇಡ್‌ನಿಂದ ಮನಬಂದಂತೆ ಮುಖಕ್ಕೆ ಹಲ್ಲೆ ನಡೆಸಿದ್ದಾನೆ.

ತೀವ್ರ ಗಾಯಗೊಂಡ ಲಕ್ಷ್ಮಿ ನೆರವಿಗಾಗಿ ಕೂಗಿಕೊಂಡಿದ್ದಾರೆ. ಕಿರುಚಾಟ ಕೇಳಿದ ಅಕ್ಕಪಕ್ಕದವರು ಸ್ಥಳಕ್ಕೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದಾನೆ. ನಂತರ ಸಮೀಪದ ಆಸ್ಪತ್ರೆಗೆ ಅವರನ್ನುದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

5 ಕಡೆ ಗಾಯ
ಲಕ್ಷ್ಮಿ ಅವರ ಹಣೆ ಸೇರಿದಂತೆ ಮುಖದ 5 ಕಡೆ ಗಾಯವಾಗಿದೆ. ಹಲ್ಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಅವರ ಕೈ ಮತ್ತು ಬೆರಳುಗಳಿಗೂ ಗಾಯವಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ಅವರು ಈಗಷ್ಟೆ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿ ನೀಲಕಂಠನ ವಿರುದ್ಧ ಕೊಲೆ ಯತ್ನ (ಐಪಿಸಿ 307) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

Write A Comment