ಕನ್ನಡ ವಾರ್ತೆಗಳು

ಇನ್‌ಸ್ಪೆಕ್ಟರ್ ಪ್ರಮೋದ್ ಅಮಾನತು ಪ್ರಕರಣ : ಉನ್ನತ ಮಟ್ಟದ ತನಿಖೆಗೆ ಆಗ್ರಹ

Pinterest LinkedIn Tumblr

Kankanady_Circle_Pramod

ಮಂಗಳೂರು,ಡಿ.09: ಕಾಂಗ್ರೆಸ್ ಸರಕಾರ ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಸಾಕ್ಷಿಯಾಗಿದೆ. ಕಾನೂನು ಬಾಹಿರ ಚಟುವಟಿಕೆ ನಡೆಸಿದಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿಯನ್ನೇ ಅಮಾನತು ಮಾಡುವಷ್ಟರ ಮಟ್ಟಿಗೆ ರಾಜಕೀಯ ಹಸ್ತಕ್ಷೇಪವಾಗಿರುವುದು ಆತಂಕಕಾರಿ ಬೆಳವಣಿಗೆ. ಈ ಪ್ರಕರಣದ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ದ.ಕ.ಜಿಲ್ಲೆಯಲ್ಲಿ ರಾಜಕೀಯ ಹಸ್ತಕ್ಷೇಪ ಪೊಲೀಸ್ ಇಲಾಖೆಯನ್ನು ಸರಿಯಾಗಿ ಕಾರ್ಯನಿರ್ವಹಿಸಲು ಬಿಡುತ್ತಿಲ್ಲ ಎಂಬುದನ್ನು ಜಿಲ್ಲಾ ಬಿಜೆಪಿ ನಿರಂತರವಾಗಿ ಹೇಳುತ್ತಲೇ ಬಂದಿದೆ. ಮರಗಳ್ಳತನ, ಮರಳು ಮಾಫಿಯಾ ಸೇರಿದಂತೆ ಕೊಲೆಯಂತಹ ಅಹಿತಕರ ಘಟನೆಗಳು ನಡೆದಾಗಲೂ ಇಲಾಖೆಯನ್ನು ಸ್ವತಂತ್ರವಾಗಿ ಕಾರ್ಯನಿರ್ವಯಿಸಲು ಕಾಂಗ್ರೆಸ್ ನಾಯಕರು ಬಿಡುತ್ತಿಲ್ಲ ಎಂಬುದು ಸಾಬೀತಾಗಿದೆ. ಅದಕ್ಕೆ ಪುಷ್ಠಿ ನೀಡುವಂತೆ ಕಾನೂನು ಬಾಹಿರ ಕೃತ್ಯ ನಡೆಸಿದಾತನನ್ನು ಬಂಧಿಸಿದ ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರನ್ನು ಅಮಾನತು ಮಾಡುವಷ್ಟರ ಮಟ್ಟಿಗೆ ಆಡಳಿತ ತಲುಪಿರುವುದು ದುರದೃಷ್ಟಕರ.

Kankanady_Police_Protest_3

ಪ್ರಮೋದ್ ಅವರ ಅಮಾನತು ಪ್ರಕರಣದ ಹಿಂದೆ ಜಿಲ್ಲೆಯ ಕಾಂಗ್ರೆಸ್ ಸಚಿವರು, ಶಾಸಕರ ಒತ್ತಡ ಇದೆ ಎಂಬುದನ್ನು ಸಾರ್ವಜನಿಕರೇ ಬೊಟ್ಟು ಮಾಡುತ್ತಿದ್ದಾರೆ. ಆದ್ದರಿಂದ ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಂಶವನ್ನು ಜನತೆಯ ಮುಂದಿಡಬೇಕು. ಜಿಲ್ಲೆಯ ಇತಿಹಾಸದಲ್ಲಿಯೇ ಪೊಲೀಸರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರೆ ಗಂಭೀರತೆಯನ್ನು ಸರಕಾರ ಮನಗಾಣಬೇಕು.

ದ.ಕ.ದಲ್ಲಿ ಜೈಲಿನೊಳಗೂ ಭದ್ರತೆಯಿಲ್ಲ. ಪೊಲೀಸರಿಗೂ ಭದ್ರತೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿಯ ಘಟನೆಗಳು ಮರುಕಳಿಸಿದರೆ ಜನತೆ ಇಲಾಖೆಯ ಮೇಲೆ ನಂಬಿಕೆ ಇಡುವುದಾದರೂ ಹೇಗೆ?. ಸರಕಾರ ಗಂಭೀರತೆಯನ್ನು ಅರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ  ಕೆ.ಪ್ರತಾಪಸಿಂಹ ನಾಯಕ್ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Write A Comment