ಬಂಟ್ವಾಳ, ಡಿ.8: ಶಂಕಿತ ಸಿಡುಬು ಸೋಂಕಿನಿಂದಾಗಿ ವಿದ್ಯಾರ್ಥಿನಿಯೋರ್ವಳು ರವಿವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ. ಬಿ.ಮೂಡ ಗ್ರಾಮದ ದೈಪಲ ನಿವಾಸಿ ದೇವದಾಸ ಮತ್ತು ಸಾವಿತ್ರಿ ದಂಪತಿಯ ಮಗಳಾದ ಮಧುಶ್ರೀ(17) ಮೃತ ವಿದ್ಯಾರ್ಥಿನಿ.
ಮಧುಶ್ರೀ ಬಿ.ಸಿ.ರೋಡ್ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದಳು. 3 ತಿಂಗಳ ಹಿಂದೆ ಮಧುಶ್ರೀಯ ಮೈಮೇಲೆ ಆಕಸ್ಮಿಕವಾಗಿ ಗುಳ್ಳೆಗಳು ಕಾಣಿಸಿದ್ದರಿಂದ ಸ್ಥಳೀಯ ನಾಟಿ ವೈದ್ಯರಿಂದ ಚಿಕಿತ್ಸೆ ಮಾಡಿಸಲಾಗಿತ್ತು. ಭಾಗಶಃ ಗುಣಮುಖವಾಗಿದ್ದ ಗುಳ್ಳೆ ಇತ್ತೀಚೆಗೆ ಮತ್ತೆ ಮೈಮೇಲೆ ಕಾಣಿಸಿದ್ದರಿಂದ ಮಂಗಳೂರಿನ ಕಂಕನಾಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದೊಂದು ವಾರದಿಂದ ಆಸ್ಪತ್ರೆಯಲ್ಲಿದ್ದ ಮಧುಶ್ರೀಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶನಿವಾರ ನಗರದ ಅತ್ತಾವರದ ಇನ್ನೊಂದು ಖಾಸಗಿ ಆಸ್ಪತ್ರೆ ಸಾಗಿಸಲಾಯಿತು. ಆದರೆ, ರವಿವಾರ ರಾತ್ರಿ ಚಿಕಿತ್ಸೆ ಲಕಾರಿಯಾಗದೆ ಮಧುಶ್ರೀ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಸಿಡುಬು ಸೋಂಕಿನಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಶಂಕಿಸಿದ್ದು, ವೈದ್ಯಕೀಯ ಪರೀಕ್ಷಾ ವರದಿ ಇನ್ನು ಬರಬೇಕಾಗಿದೆ.
ಸೋಮವಾರ ಮೃತದೇಹವನ್ನು ದೈಪಲ ಮನೆಗೆ ತರಲಾಗಿದ್ದು, ಅಂತಿಮ ದರ್ಶನ ಪಡೆಯಲಾಯಿತು. ವಿದ್ಯಾರ್ಥಿನಿಯ ಅಕಾಲಿಕ ಸಾವಿಗೆ ಮೊಡಂಕಾಪು ಕಾರ್ಮೆಲ್ ಕಾನ್ವೆಂಟ್ ಕಾಲೇಜಿನಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಿದ್ದು, ಕಾಲೇಜು ಪ್ರಾಂಶುಪಾಲೆ ಉಜ್ವಲಾ ಎ.ಸಿ. ಮತ್ತು ಉಪನ್ಯಾಸಕರು ಮಧುಶ್ರೀ ಮನೆಗೆ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ತಂದೆ, ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದಾರೆ.
