ಮಂಗಳೂರು : ವಿಧಾನಪರಿಷತ್ ಚುನಾವಣೆಗೆ ದ.ಕ.ಜಿಲ್ಲೆಯಿಂದ ಅಭ್ಯರ್ಥಿ ಅಯ್ಕೆ ಹಿನ್ನೆಲೆಯಲ್ಲಿ ಈಗಾಗಲೇ ಉಡುಪಿಯಲ್ಲಿ ಪ್ರಮುಖ ನಾಯಕರ ಕೆಂಗಣ್ಣಿಗೆ ಗುರಿಯಾಗಿ ಇದೀಗ ಬಂಡಾಯದ ಬಿಸಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ದ.ಕ.ಜಿಲ್ಲೆಯಲ್ಲೂ ಬಂಡಾಯದ ಬಿಸಿ ತಟ್ಟಿದ್ದು, ಅಭ್ಯರ್ಥಿ ಅಯ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಿಕಟ ಪೂರ್ವ ಎಮ್ಎಲ್ಸಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಮತ್ತೊಮ್ಮೆ ಟಿಕೆಟ್ ನೀಡಿರುವುದನ್ನು ಬಲವಾಗಿ ವಿರೋಧಿಸುವುದಾಗಿ ಕಾಂಗ್ರೆಸ್ನ ಹಿರಿಯ ಕಾರ್ಯಕರ್ತ, ಟಿಕೆಟ್ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಟಿಕೆಟ್ ನೀಡಿರುವ ಪ್ರತಾಪ್ ಚಂದ್ರ ಶೆಟ್ಟಿ ಈ ಹಿಂದೆ ಅಯ್ಕೆಯಾದಾಗ ಯಾವುದೇ ಕೆಲಸ ಮಾಡಿಲ್ಲ. ಪ್ರತಾಪ್ ಚಂದ್ರ ಶೆಟ್ಟಿ ಅವರು ತನಗೆ ಟಿಕೆಟ್ ಬೇಡ ಎಂದರೂ ಪಕ್ಷದ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಕೈವಾಡದಿಂದ ಮತ್ತೆ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಆರೋಪಿಸಿದರು.
ಉತ್ತಮ ಕೆಲಸ ಮಾಡುವ ಅಭ್ಯರ್ಥಿಗಳನ್ನು ಪಕ್ಷ ಅಯ್ಕೆ ಮಾಡಲಿ. ಅದು ಬಿಟ್ಟು ಅಯ್ಕೆಯಾದ ಮೇಲು ಯಾವೂದೇ ಕೆಲಸ ಮಾಡದೇ ಇರುವಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡುವುದನ್ನು ತಾನು ವಿರೋಧಿಸುವುದಾಗಿ ಹೇಳಿದರು.
ಪ್ರತಾಪ್ ಚಂದ್ರ ಶೆಟ್ಟಿಯವರು ಈ ಹಿಂದೆ ವಿಧಾನಪರಿಷತ್ಗೆ ಆಯ್ಕೆಯಾದರೂ ಒಂದೇ ಒಂದು ಪಂಚಾಯತ್ಗೆ ಭೇಟಿ ನೀಡಿಲ್ಲ. ಸಭೆಗಳಲ್ಲಿ ಭಾಗವಹಿಸಿಲ್ಲ. ಕನಿಷ್ಠ ಅನುದಾನವನ್ನೂ ನೀಡಿಲ್ಲ. ಇಂಥವರಿಗೆ ಪಕ್ಷ ಟಿಕೆಟ್ ನೀಡುತ್ತಿದೆ. ಅವರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಆದರೆ, ಕೆಲಸ ಮಾತ್ರ ನಗಣ್ಯ ಎಂದರು.
ತನಗೆ ಸ್ವಾಮಿ ವಿವೇಕಾನಂದ, ನಾರಾಯಣಗುರು ಹಾಗೂ ಬಿ.ಜನಾರ್ದನ ಪೂಜಾರಿಯವರು ಪ್ರೇರಣೆ. ನಾನು 43 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೇನೆ. 1982ರಿಂದ ಪೂಜಾರಿ ಜೊತೆಗಿದ್ದೇನೆ. ಇಲ್ಲಿಯ ತನಕ ಕಾಂಗ್ರೆಸ್ನಿಂದ ಯಾವುದೇ ಹುದ್ದೆ ಪಡೆದಿಲ್ಲ, ಅರ್ಜಿಯೂ ನೀಡಿಲ್ಲ. ಆದರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಸಕ್ರಿಯವಾಗಿ ದುಡಿಯುತ್ತಿದ್ದೇನೆ. ಬ್ಲಾಕ್ ಕಾಂಗ್ರೆಸ್ನಿಂದ ಜಿಲ್ಲಾ ಕಾಂಗ್ರೆಸ್, ಕೆಪಿಸಿಸಿ ವಕ್ತಾರನಾಗಿ ಕೆಲಸ ನಿರ್ವಹಿಸಿದ್ದೇನೆ. ಕಾಂಗ್ರೆಸ್ ಪಕ್ಷ ನಿಷ್ಠಾವಂತ ಕಾಂಗ್ರೆಸ್ಸಿಗರನ್ನು ಕಡೆಗಣಿಸಿ ತನಗೆ ಟಿಕೆಟ್ ಬೇಡ ಎಂದು ಹೇಳಿದವರಿಗೆ ಟಿಕೆಟ್ ನೀಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ನಲ್ಲಿ ಅವಕಾಶಗಳನ್ನು ನೀಡಲಾಗಿಲ್ಲ, ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಹಾಗೂ ಹಿಂದುಳಿದವರಿಗೆ ಪ್ರಾತಿನಿಧ್ಯ ನೀಡಿಲ್ಲ. ಶೇ.60ರಷ್ಟು ಹಿಂದುಳಿದವರ ಮತಗಳಿವೆ. ಅದರಲ್ಲೂ ಬಿಲ್ಲವರ ಮತಗಳು ಹೆಚ್ಚಿವೆ. ಕಾಂಗ್ರೆಸಿನ ಬೆನ್ನೆಲುಬು ಹಿಂದೂಳಿದ ವರ್ಗ. ಆದರೂ ಹಿಂದುಳಿದವರ ವರ್ಗವನ್ನು ಕಾಂಗ್ರೆಸ್ ಕಡೆಗಣಿಸುತ್ತಿದೆ ಎಂದು ಆರೋಪಿಸಿದರು.
ತಾನು ಈ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ನಿರ್ಧಾರ ಕೈಗೊಂಡಿದ್ದು, ವಿಧಾನಪರಿಷತ್ ಚುನಾವಣೆಗೆ ಡಿ 9ರಂದು ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್ ಪಕ್ಷದ ಹೆಸರಿನಲ್ಲೇ ನಾಮಪತ್ರ ಸಲ್ಲಿಸುತ್ತೇನೆ. ಒಂದು ವೇಳೆ ಪಕ್ಷ ಪ್ರತಾಪ್ ಚಂದ್ರರನ್ನು ಬಿಟ್ಟು ಬೇರೆ ಯಾವುದೇ ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿದರೆ ತಾನು ನಾಮಪತ್ರವನ್ನು ಹಿಂಪಡೆಯುತ್ತೇನೆ. ಇಲ್ಲದಿದ್ದರೆ ತನ್ನ ಸ್ಪರ್ಧೆ ಖಚಿತ. ಯಾವುದೇ ಆಮಿಷಗಳಿಗೆ ಮಣಿಯುವುದಿಲ್ಲ. ತಾನು ಚುನಾವಣೆಯಲ್ಲಿ ಆಸೆಯಿಟ್ಟವನಲ್ಲ. ಅಧಿಕಾರವೂ ಬೇಡ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಯುವ ಕಾಂಗ್ರೆಸ್ನ ಮಾಜಿ ಜಿಲ್ಲಾಧ್ಯಕ್ಷ ಅರುಣ್ ಕುವೆಲ್ಲೊ, ಮಾಜಿ ಮೇಯರ್ ಪುರಂದರ ದಾಸ್ ಕೂಳೂರು, ಕಾರ್ಯಕರ್ತ ಶಶಿರಾಜ್ ಶೆಟ್ಟಿ ಕೊಳಂಬೆ ಮುಂತಾದವರು ಉಪಸ್ಥಿತರಿದ್ದರು.



