ಮಂಗಳೂರು, ಡಿ.7: ದ.ಕ. ಜಿಲ್ಲಾ ಪಪೂ ಶಿಕ್ಷಣ ಇಲಾಖೆ, ಬಂಟರ ಯಾನೆ ನಾಡವರ ಮಾತೃ ಸಂಘ ದ.ಕ. ಮತ್ತು ಶ್ರೀ ರಾಮಕೃಷ್ಣ ಪದವಿಪೂರ್ವ ಕಾಲೇಜು ಮಂಗಳೂರು ಇವುಗಳ ಆಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟವು ರವಿವಾರ ಸಮಾಪನಗೊಂಡಿದೆ. ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ತಂಡ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಪುರುಷರ ವಿಭಾಗದಲ್ಲಿ 67 ಅಂಕಗಳು ಹಾಗೂ ಮಹಿಳೆ ಯರ ವಿಭಾಗದಲ್ಲಿ 125 ಅಂಕಗಳನ್ನು ಗಳಿಸುವ ಮೂಲಕ ದ.ಕ. ಜಿಲ್ಲೆ ಅಗ್ರಸ್ಥಾನವನ್ನು ಪಡೆದುಕೊಂಡಿದೆ.ಉಳಿದಂತೆ ಪುರುಷರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ 43 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನ ಗಳಿಸಿದ್ದು, ಉಡುಪಿ 23 ಅಂಕಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನ ಹಾಗೂ 7 ಅಂಕಗಳನ್ನು ಪಡೆದ ಉತ್ತರ ಕನ್ನಡ ಜಿಲ್ಲೆ ನಾಲ್ಕನೆ ಸ್ಥಾನ ಗಳಿಸಿದೆ.
ಮಹಿಳೆಯರ ವಿಭಾಗದಲ್ಲಿ 18 ಅಂಕಗಳನ್ನು ಪಡೆದ ಉತ್ತರ ಕನ್ನಡ ಜಿಲ್ಲೆ ಎರಡನೆ ಸ್ಥಾನ, 16 ಅಂಕಗಳನ್ನು ಪಡೆದ ಬೆಂಗಳೂರು ಉತ್ತರ ಮೂರನೆ ಸ್ಥಾನ ಹಾಗೂ ಉಡುಪಿ 13 ಅಂಕಗಳನ್ನು ಗಳಿಸುವ ಮೂಲಕ ನಾಲ್ಕನೆ ಸ್ಥಾನ ಪಡೆದುಕೊಂಡಿದೆ.
ವೈಯಕ್ತಿಕ ಚಾಂಪಿಯನ್: ಪುರುಷರ ವಿಭಾಗದಲ್ಲಿ ಬೆಂಗಳೂರು ದಕ್ಷಿಣದ ದೇವಯ್ಯ ಟಿ.ಎಚ್. 800 ಮೀ. ಮತ್ತು 1,500 ಮೀ. ಓಟದಲ್ಲಿ ಪ್ರಥಮ ಸ್ಥಾನ ಹಾಗೂ 400 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದು 11 ಅಂಕಗಳನ್ನು ಗಳಿಸುವ ಮೂಲಕ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿ ಪಡೆದಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ದ.ಕ. ಜಿಲ್ಲೆಯ ವೆನಿಸಾ ಕ್ಯಾರಲ್ ಕಾರ್ಡ್ರೋಸ್ 400 ಮೀ., 800 ಮೀ. ಮತ್ತು 400 ಮೀ.ಹರ್ಡಲ್ಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಒಟ್ಟು 15 ಅಂಕಗಳನ್ನು ಪಡೆಯುವ ಮೂಲಕ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ದ.ಕ., ಉಡುಪಿಗೆ ಉತ್ತಮ ಅಥ್ಲೆಟಿಕ್: ಉತ್ತಮ ಅಥ್ಲೆಟಿಕ್‌ಗಳಾಗಿ ಉಡುಪಿಯ ಮನೀಶ್ ಮತ್ತು ದ.ಕ. ಜಿಲ್ಲೆಯ ಸಿಮಿ ಎನ್.ಎಸ್. ಪ್ರಶಸ್ತಿ ಗಳಿಸಿದ್ದಾರೆ.











