ಲಂಡನ್, ಡಿ.6: ಬ್ರಿಟನ್‌ನಲ್ಲೂ ಐಎಸ್ ಉಗ್ರ ಸಂಘಟನೆ ಬೆಂಬಲಿಗರು ಅಟ್ಟಹಾಸ ಮೆರೆದಿದ್ದು, ಇಲ್ಲಿನ ಮೆಟ್ರೋ ರೈಲು ನಿಲ್ದಾಣದಲ್ಲಿ ಮೂವರನ್ನು ಇರಿದು ಗಾಯಗೊಳಿಸಿದ್ದಾರೆ. ಅದರಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ.
ದಿಸ್‌ಈಸ್ ಫಾರ್ ಸಿರಿಯಾ ಎಂದು ಅಬ್ಬರಿಸುತ್ತಾ ನಿಲ್ದಾಣಕ್ಕೆ ನುಗ್ಗಿದ ಭಯೋತ್ಪಾದಕ ತನ್ನ ಬಳಿಯಿದ್ದ ಏಳೂವರೆ ಸೆಂಟಿಮೀಟರ್ ಉದ್ದದ ಚಾಕುವಿನಿಂದ ವ್ಯಕ್ತಿಯ ಕುತ್ತಿಗೆಗೆ ಇರಿದಿದ್ದಾನೆ. ಅವನು ಕೆಳಗೆ ಬಿದ್ದ ನಂತರ ಇನ್ನಿಬ್ಬರ ಮೇಲೂ ದಾಳಿ ನಡೆಸಿದ್ದಾನೆ. ಇದರಿಂದ ಹೌಹಾರಿದ ಜನ ನಿಲ್ದಾಣದಿಂದ ದಿಕ್ಕುಪಾಲಾಗಿ ಓಡಿದ್ದಾರೆ. ಇದೇ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಚಾಕು ಹಿಡಿದಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವನ ಸಹಚರರೆಂದು ನಂಬಲಾದ ಇನ್ನಿಬ್ಬರನ್ನು ವಶಕ್ಕೆ ತೆಗೆದುಕೊಂಡು ತನಿಖೆಗೆ ಗುರುಪಡಿಸಿದ್ದಾರೆ.
ಇದನ್ನು ನಿಜಕ್ಕೂ ನಾವು ಭಯೋತ್ಪಾದಕ ಕೃತ್ಯ ಎಂದೇ ನಿರ್ಧರಿಸಿದ್ದೇವೆ. ಏಕೆಂದರೆ ಅಪರಿಚಿತ ವ್ಯಕ್ತಿ ಇದೆಲ್ಲವೂ ಸಿರಿಯಾಕ್ಕಾಗಿ ಎಂದು ಘೋಷಣೆ ಮಾಡಿದ್ದಾರೆ. ಹಾಗಾಗಿ ಇದು ಉಗ್ರರ ಕೃತ್ಯವೇ ಎಂದು ಬಾವಿಸಲಾಗಿದೆ ಎಂದು ಕಮಾಂಡರ್ ರಿಚರ್ಡ್ ವಾಲ್ಟನ್ ಹೇಳಿದ್ದಾರೆ.
ಅಲ್ಲಿದ್ದ ಪ್ರಯಾಣಿಕರನ್ನುದ್ದೇಶಿಸಿ, ನಾವು ನಿಮ್ಮನ್ನೆಲ್ಲಾ ಇರಿದು ಕೊಲ್ಲುತ್ತೇವೆ ಎಂದು ಚಾಕು ಹಿಡಿದ ವ್ಯಕ್ತಿ ಕೂಗುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಇದೇ ವೇಳೆ, ಕ್ಯಾಲಿಫೋರ್ನಿಯಾದಲ್ಲಿ ೧೬ ಜನರನ್ನು ಕೊಂದ ದಂಪತಿ ನಮ್ಮ ಸಂಘಟನೆಯ ಸದಸ್ಯರೇ ಎಂದು ಐಎಸ್ ಹೇಳಿದೆ.
