ಕರ್ನಾಟಕ

ಕನ್ನಡದಲ್ಲಿ ಸೆಟ್ಟೇರಿದ ‘ಕರುಣಾ-ನಿಧಿ’ಗೆ ಸಿನಿಮಾ

Pinterest LinkedIn Tumblr

Karuna-Nidhi

ಕನ್ನಡದಲ್ಲಿ ಮತ್ತೊಬ್ಬ ರಾಜಕಾರಣಿಯ ಹೆಸರಿನ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗುತ್ತಿದೆ. ಈ ಬಾರಿಯ ಸಿನಿಮಾದ ಟೈಟಲ್‌ಗೆ ಗುರಿಯಾಗಿರುವುದು ಪಕ್ಕದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಐಡಿಎಂಕೆ ವರಿಷ್ಠ ಕರುಣಾನಿಧಿ ಹೆಸರು. ಇತ್ತೀಚೆಗೆ ನಟ, ನಿರ್ದೇಶಕ ಎಸ್.ಮೋಹನ್ ನಾಯಕನಾಗಿ ಅಭಿನಯಿಸುತ್ತಿರುವ ಕರುಣಾ-ನಿಧಿ ಎಂಬ ಹೆಸರಿನ ಚಿತ್ರವೊಂದು ಕಳೆದ ವಾರ ಮುಹೂರ್ತ ಆಚರಿಸಿಕೊಂಡು ಸೆಟ್ಟೇರಿದೆ.

ಕಿರುತೆರೆಯ ಖ್ಯಾತ ನಿರ್ದೇಶಕ ಎ.ಜಿ. ಶೇಷಾದ್ರಿ ಆಕ್ಷನ್-ಕಟ್ ಹೇಳಲಿರುವ ಈ ಚಿತ್ರದಲ್ಲಿ ಮೋಹನ್‌ಗೆ ನಾಯಕಿಯಾಗಿ ಮತ್ತೊಬ್ಬ ವಿವಾದಿತ ನಟಿ ಖುಷಿ ಮುಖರ್ಜಿ ಜೊತೆಯಾಗಿದ್ದಾರೆ. ಚಿತ್ರದ ಸೆಟ್ಟೇರಿದ ನಂತರ ಚಿತ್ರದ ಬಗ್ಗೆ ಮಾತನಾಡಲು ಮಾಧ್ಯಮಗಳೊಂದಿಗೆ ಪತ್ರಿಕಾಗೋಷ್ಠಿ ಕರೆದಿದ್ದ ಚಿತ್ರತಂಡ ಕರುಣಾ-ನಿಧಿ ಶೀರ್ಷಿಕೆಯ ಪೂರ್ವಾಪರಗಳನ್ನು ಹಂಚಿಕೊಂಡಿತು.

ನಿರೀಕ್ಷೆಯಂತೆಯೇ, ಕರುಣಾ-ನಿಧಿ ಚಿತ್ರದ ಟೈಟಲ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಿತ್ರದ ನಾಯಕ ಮೋಹನ್, ಯಾವುದೇ ದುರುದ್ದೇಶದಿಂದಾಗಲೀ ಅಥವಾ ಯಾರನ್ನೂ ಅವಮಾನಿಸುವ ಸಲುವಾಗಿ ಇಂತಹ ಶೀರ್ಷಿಕೆಯನ್ನು ಇಡಲಾಗಿಲ್ಲ. ಇಡೀ ಚಿತ್ರದ ಕಥೆಗೆ ಅಂತಹ ಟೈಟಲ್‌ವೊಂದರ ಅಗತ್ಯವಿತ್ತು. ಈ ಕಾರಣದಿಂದಾಗಿ ಕರುಣಾನಿಧಿ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಈ ಹೆಸರಿಗೂ ಯಾವುದೇ ವ್ಯಕ್ತಿಗೂ ಸಂಬಂಧವಿಲ್ಲ ಎಂದು ಮೊದಲ ಮಾತಿನಲ್ಲಿಯೇ ಸಮರ್ಥನೆ ನೀಡಿದರು.

ಚಿತ್ರದ ನಿರ್ದೇಶಕ ಎ.ಜಿ. ಶೇಷಾದ್ರಿ ಮಾತನಾಡಿ, ಸೀರಿಯಲ್ ಡೈರೆಕ್ಟರ್ ಆಗಿದ್ದವನು ಸಿನಿಮಾ ಮಾಡುತ್ತಿದ್ದೇನೆ. ಒಳ್ಳೆಯ ಕಥೆಯಿದ್ದರೂ ನಿರ್ಮಾಪಕರನ್ನು ಒಪ್ಪಿಸುವುದು ಕಷ್ಟ. ನಿರ್ಮಾಪಕರನ್ನು ಒಪ್ಪಿಸಿದರೆ ನಿರ್ದೇಶಕನೊಬ್ಬ ಗೆದ್ದಂತೆ. ನಾನು 2-3 ವರ್ಷಗಳಿಂದ ಅಂತಹ ಪ್ರಯತ್ನದಲ್ಲಿದ್ದು, ಅಂತಿಮವಾಗಿ ನಿರ್ಮಾಪಕರು ಸಿಕ್ಕಿ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದೇನೆ ಎಂದು ಚಿತ್ರ ನಿರ್ದೇಶನದ ಹಿಂದಿನ ಭಗೀರಥ ಪ್ರಯತ್ನವನ್ನು ವಿವರಿಸಿದರು. ಚಿತ್ರದಲ್ಲಿ ಎರಡು ಶೇಡ್‌ಗಳಿರುವ ಕಥೆಯಿದ್ದು, ಹಲವು ಪ್ರಶ್ನೆಗಳು ಏಳಬಹುದಾದರೂ ಎಲ್ಲ ಪ್ರಶ್ನೆಗಳಿಗೂ ಚಿತ್ರ ಮುಗಿಯುವ 5-6 ನಿಮಿಷಗಳ ಮುಂಚೆ ಉತ್ತರ ಸಿಗುತ್ತದೆ. ಚಿತ್ರದ ಮೊದಲರ್ಧ ನಗರದಲ್ಲಿ ನಡೆದರೆ ಎರಡನೇ ಅರ್ಧ ಹಳ್ಳಿಯಲ್ಲಿ ನಡೆಯಲಿದೆ ಎಂದರು.

ಚಿತ್ರದ ಸಂಗೀತ ನಿರ್ದೇಶಕ ಗೌತಮ್ ಶ್ರೀವತ್ಸ ಮಾತನಾಡಿ, ಚಿತ್ರದಲ್ಲಿ 4 ಹಾಡುಗಳಿದ್ದು, ಎರಡು ಬಿಟ್ ಸಾಂಗ್‌ಗಳಿವೆಯಂತೆ. ನಿರ್ಮಾಪಕ ಮೂರ್ತಿ ಮಾತನಾಡಿ, ನಾನು ನಿರ್ದೇಶಕರೊಂದಿಗೆ ಹಲವು ವರ್ಷ ಒಡನಾಟ ಹೊಂದಿದ್ದೇನೆ. ಅವರ ಅನೇಕ ಧಾರಾವಾಹಿಗಳಲ್ಲಿ ನಾನು ಕೂಡ ಒಬ್ಬ ಕಲಾವಿದನಾಗಿ ಅಭಿನಯಿಸಿದ್ದೇನೆ. ನಿರ್ಮಾಪಕರನ್ನು ಉಳಿಸುವ ಅವರ ದೃಷ್ಠಿ, ಅವರ ಅನುಭವ ಸಾಕಷ್ಟಿದೆ ಎಂದರಲ್ಲದೆ, ಚಿತ್ರರಂಗದೊಂದಿಗಿನ ತಮ್ಮ ನಂಟನ್ನು ತೆರೆದಿಟ್ಟರು

Write A Comment