ರಾಷ್ಟ್ರೀಯ

ತಮಿಳುನಾಡಿನಲ್ಲಿ ಮುಂದುವರೆದ ಮಳೆ । ಸಾಂಕ್ರಾಮಿಕ ರೋಗದ ಭೀತಿ :18 ಲಕ್ಷ ಜನರಿಗೆ ಆರೋಗ್ಯ ತಪಾಸಣೆ

Pinterest LinkedIn Tumblr

Tamil-Nadu-4

ಚೆನ್ನೈ, ಡಿ.6: ಕಳೆದ ಒಂದು ತಿಂಗಳಿನಿಂದ ತಮಿಳುನಾಡಿನ ಸರ್ವನಾಶಕ್ಕೆ ನಿಂತಂತೆ ಸುರಿಯುತ್ತಿರುವ ಮಳೆ ಇಂದೂ ಕೂಡ ಮುಂದುವರೆದಿದ್ದು, ಇಲ್ಲಿನ ಜನರ ತಲ್ಲಣ ಉಲ್ಭಣಗೊಂಡಿದೆ. ರಸ್ತೆಯಲ್ಲೆಲ್ಲಾ 5 ಅಡಿಗೂ ಹೆಚ್ಚು ನೀರು ನಿಂತು ದುರ್ವಾಸನೆ ಬೀರುತ್ತಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಾವಿರಾರು ವೈದ್ಯಕೀಯ ಕೇಂದ್ರಗಳನ್ನು ತೆರೆದು ಸುಮಾರು 18 ಲಕ್ಷ ಜನರಿಗೆ ಆರೋಗ್ಯ ತಪಾಸಣೆ ನಡೆಸುವ ಕಾರ್ಯ ನಡೆಯುತ್ತಿದೆ. ಸಾವಿನ ಸಂಖ್ಯೆ 500 ದಾಟಿದ್ದು, ಆಸ್ಪತ್ರೆ ತುಂಬಾ ರೋಗಿಗಳು ಕಂಡು ಬರುತ್ತಿದ್ದಾರೆ. ಸಾಂಕ್ರಾಮಿಕ ರೋಗ ಉಲಲ್ಬಣವಾಗುವ ಸಾಧ್ಯತೆ ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ಔಷಧಿ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲಾಗಿದ್ದು, ಅವುಗಳ ವಿತರಣೆಗೆ ಮಳೆ ಅಡ್ಡಿಯಾಗಿದೆ.

ನಿನ್ನೆ ಮಳೆ ನಿಂತು ಚೆನ್ನೈ ಸಹಜಸ್ಥಿತಿಗೆ ತೆರಳಲಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತಾದರೂ ಇಂದು ಬೆಳಗ್ಗಿನಿಂದ ಮತ್ತೆ ಸುರಿಯುತ್ತಿರುವ ಧಾರಾಕಾರ ಮಳೆ ಚೆನ್ನೈಯನ್ನು ಸರ್ವನಾಶ ಮಾಡುತ್ತದೆಯೇನೋ ಎಂಬ ಭೀತಿ ಕಾಡುತ್ತಿದೆ.

ಪ್ರವಾಹದಿಂದ ಮೃತರಾದ ಕುಟುಂಬಕ್ಕೆ ಕೇಂದ್ರ ಸರ್ಕಾರ 2 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಗಾಯಾಳುಗಳಿಗೆ 30 ಸಾವಿರ ರೂ. ನೀಡಲು ನಿರ್ಧರಿಸಿದೆ. ಆದರೆ ಸಾವಿನ ಮತ್ತು ಗಾಯಾಳುಗಳ ನಿಖರ ಮಾಹಿತಿ ತಿಳಿಯಲು ಸಾಧ್ಯವಾಗುತ್ತಿಲ್ಲ. ದಿನ ಕಳೆದಂತೆ ಸಾವಿನ ಸಂಖ್ಯೆ ಮತ್ತು ಸಾಂಕ್ರಾಮಿಕ ರೋಗಗಳು ಹೆಚ್ಚಾಗತೊಡಗಿವೆ. ಬಯಲು ಪ್ರದೇಶಗಳಲ್ಲಿ ತಾತ್ಕಾಲಿಕ ಬಿಡಾರ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ನಿರಂತರ ಮಳೆ ಸುರಿಯುತ್ತಿರುವುದರಿಂದ ಅಲ್ಲೂ ಕೂಡ ಜನರಿಗೆ ರಕ್ಷಣೆ ಇಲ್ಲದಂತಾಗಿದೆ.

ಕುಂಭದ್ರೋಣ ಮಳೆಯಿಂದ ಕಂಗಾಲಾಗಿರುವ ಚೆನ್ನೈ ಜನತೆ ಸಾಮೂಹಿಕವಾಗಿ ಊರು ಬಿಡತೊಡಗಿದ್ದಾರೆ. ಬೇರೆ ಬೇರೆ ಕಡೆಗಳಿಂದ ಬಂದು ಚೆನ್ನೈನಲ್ಲಿ ನೆಲೆಸಿದ್ದವರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಅನ್ನ, ಕುಡಿಯುವ ನೀರು, ಹಾಲು, ದಿನಬಳಕೆ ವಸ್ತುಗಳಿಗಾಗಿ ಹಾಹಾಕಾರ ಮುಂದುವರೆದಿದೆ. ರಕ್ಷಣಾ ಪಡೆಯ ಪರಿಹಾರ ಕಾರ್ಯ ಚುರುಕಾಗಿದ್ದರೂ ಸಹ ಮತ್ತೆ ಮತ್ತೆ ಸುರಿಯುತ್ತಿರುವ ಮಳೆಯಿಂದ ಅಡ್ಡಿಯಾಗುತ್ತಿದೆ.

ಪರಿಹಾರ ತಲುಪದೆ ಇರುವುದರಿಂದ ಪ್ರತಿಭಟನೆ, ಗಲಾಟೆಗಳು ಅಲ್ಲಲ್ಲಿ ನಡೆಯುತ್ತಿವೆ. ಅಧಿಕಾರಿಗಳು, ಸ್ಥಳೀಯ ಆಡಳಿತ ನಮ್ಮ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ನಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ಸಂತ್ರಸ್ತರು ಇಲ್ಲಿನ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎನ್‌ಡಿಆರ್‌ಎಫ್, ಸ್ವಯಂಸೇವಾ ಸಂಸ್ಥೆಗಳು, ಸರ್ಕಾರ ಶಕ್ತಿ ಮೀರಿ ಜನರಿಗೆ ಪರಿಹಾರ ಕಾರ್ಯ ಒದಗಿಸುವ ಪ್ರಯತ್ನ ನಡೆಸುತ್ತಿವೆ. ಚಲನಚಿತ್ರ ನಟರು, ನಾಗರಿಕರು ನೆರವಿನ ಹಸ್ತ ಚಾಚಿದ್ದಾರೆ. ಶ್ರೀಲಂಕಾ, ದಕ್ಷಿಣ ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಕಡಲೂರು, ವಿಲ್ಲುಪುರಂ, ಕಾಂಚೀಪುರಂ, ತಂಜಾವೂರು, ತಿರುವಾಂಕೂರು, ನಾಗಪಟ್ಟಣಂನಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದೆ. 50 ರಕ್ಷಣಾ ತಂಡಗಳು, 200ದೋಣಿಗಳ ಮೂಲಕ ಪರಿಹಾರ ಕಾರ್ಯ ಕೈಗೊಂಡಿದ್ದರೂ ಸಂತ್ರಸ್ತರಾಗಿರುವ ಲಕ್ಷಾಂತರ ಜನರಿಗೆ ಪರಿಹಾರ ತಲುಪಿಸಲು ಸಾಧ್ಯವಾಗುತ್ತಿಲ್ಲ. ಇದುವರೆಗೆ 4 ಲಕ್ಷಕ್ಕೂ ಹೆಚ್ಚು ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರ ಮಾಡಲಾಗಿದೆ. ಇನ್ನೂ ಹತ್ತಾರು ಲಕ್ಷ ಜನ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜಲದಿಗ್ಬಂಧನದಲ್ಲಿದ್ದಾರೆ.

ಕೇವಲ ಜನರ ಪರಿಸ್ಥಿತಿಯಷ್ಟೇ ಅಲ್ಲ; ಜಾನುವಾರುಗಳ ಪರಿಸ್ಥಿತಿಯೂ ಕೂಡ ಅಯೋಮಯವಾಗಿದೆ. ಜಾನುವಾರುಗಳು, ಸಾಕುಪ್ರಾಣಿಗಳು ಸಾಕಷ್ಟು ಪ್ರಮಾಣದಲ್ಲಿ ಸಾವನ್ನಪ್ಪಿ, ಹೊರ ತೆಗೆಯಲಾಗದೆ ನೀರಿನಲ್ಲಿ ತೇಲುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳು ಮತ್ತಷ್ಟು ಹರಡುವ ಪರಿಸ್ಥಿತಿ ಹಲವೆಡೆ ಎದುರಾಗಿದೆ. ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ನೋಡಿದಲ್ಲೆಲ್ಲಾ ನೀರು, ಕಸ, ಕೆಸರಿನ ದರ್ಶನವಾಗುತ್ತಿದೆ. ಮಳೆಗೆ ಕೊಚ್ಚಿ ಹೋಗಿರುವ ರಸ್ತೆಗಳು, ಸೇತುವೆ, ರೈಲು ಹಳಿಗಳು, ನೆಲಕಚ್ಚಿರುವ ವಿದ್ಯುತ್ ಕಂಬಗಳು, ಹೂಳು ತುಂಬಿರುವ ಒಳಚರಂಡಿ ಮತ್ತು ನೀರಿನ ಮೂಲಗಳನ್ನು ಸರಿಪಡಿಸುವುದು ಚೆನ್ನೈ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಶಾಲಾ-ಕಾಲೇಜುಗಳು ಪುನರಾರಂಭಗೊಂಡಿಲ್ಲ. ದಿನನಿತ್ಯದ ವಸ್ತುಗಳು ಸಿಗುತ್ತಿಲ್ಲ. ರೈಲ್ವೆ ಸೇವೆ ಮತ್ತು ವಿಮಾನ ಸೇವೆಯನ್ನು ನಿನ್ನೆಯಿಂದ ಪುನರಾರಂಭ ಮಾಡಲಾಗಿದೆಯಾದರೂ ಇಂದು ಬೆಳಗ್ಗೆ ಮತ್ತೆ ಮಳೆ ಹೆಚ್ಚಾಗಿದ್ದರಿಂದ ಬೆಂಗಳೂರು-ಚೆನ್ನೈನ 10 ರೈಲುಗಳನ್ನು ರದ್ದುಗೊಳಿಸಲಾಗಿದೆ.

Write A Comment