ಜಿದ್ದಾ, ಡಿ.5: ಈ ವರ್ಷ ಜೂನ್ ಅಂತ್ಯದ ವೇಳೆಗೆ ಅನ್ವಯವಾಗುವಂತೆ ಸೌದಿ ಅರೇಬಿಯದಲ್ಲಿ 35 ಸಾವಿರ ಮಂದಿ ವಿದೇಶೀಯರು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಬೆಳವಣಿಗೆಯಿಂದಾಗಿ ಸೌದಿ ಅರೇಬಿಯದಲ್ಲಿರುವ ನಿರುದ್ಯೋಗಿಗಳ ಪ್ರಮಾಣವು ಶೇಕಡಾ 5.2ರಷ್ಟು ಏರಿಕೆಯಾದಂತಾಗಿದೆ.
ಕಳೆದ ಜೂನ್ ಅಂತ್ಯದ ವೇಳೆಗೆ ಸೌದಿ ಅರೇಬಿಯದಲ್ಲಿ ಸೌದಿ ಪ್ರಜೆಗಳು ಹಾಗೂ ವಿದೇಶಿ ನಾಗರಿಕರು ಸೇರಿದಂತೆ ಒಟ್ಟು 6,82,300 ಮಂದಿ ನಿರುದ್ಯೋಗಿಗಳಾಗಿದ್ದರು ಎಂದು ವರದಿ ವಿವರಿಸಿದೆ. ಇದರಿಂದಾಗಿ ನಿರುದ್ಯೋಗಿ ವಿದೇಶೀಯರ ಪ್ರಮಾಣವು 0.6 ಶೇಕಡಾದಷ್ಟು ಏರಿಕೆಯಾದಂತಾಗಿದೆ. ವರದಿಗಳ ಪ್ರಕಾರ ವಲಸಿಗ ನಿರುದ್ಯೋಗಿಗಳಲ್ಲಿ ಶೇಕಡಾ 61 ಪುರುಷರಾಗಿದ್ದು, ಇತರ ಶೇಕಡಾ 39 ಮಹಿಳೆಯರಾಗಿದ್ದಾರೆ. ಸೌದಿ ಅರೇಬಿಯದಲ್ಲಿ ಒಟ್ಟು 63 ಲಕ್ಷ ವಿದೇಶೀಯರು ದುಡಿಯುತ್ತಿದ್ದಾರೆ. ಇದು ರಾಷ್ಟ್ರದಲ್ಲಿನ ಒಟ್ಟು ಉದ್ಯೋಗಿಗಳ ಶೇಕಡಾ 56ರಷ್ಟಾಗಿದೆ.
