ರಾಷ್ಟ್ರೀಯ

ಚೆನ್ನೈ: ಪ್ರವಾಹ ಇಳಿಮುಖ, ಪರಿಹಾರ ಕಾರ್ಯ ಚುರುಕು; ಸಾಂಕ್ರಾಮಿಕ ರೋಗದ ಭೀತಿ; 10 ಸಾವಿರಕ್ಕೂ ಅಧಿಕ ಮಂದಿಯ ರಕ್ಷಣೆ

Pinterest LinkedIn Tumblr

MCಚೆನ್ನೈ ಸಹಿತ ತಮಿಳುನಾಡಿನ ವಿವಿಧೆಡೆ ಶುಕ್ರವಾರ ಸಂಜೆ ಮತ್ತೆ ಭಾರೀ ಮಳೆಯಾಗಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಚೆನ್ನೈ,ಡಿ.4: ಶತಮಾನದಲ್ಲೇ ಕಂಡರಿಯದ ಭೀಕರ ಪ್ರವಾಹದಿಂದ ತತ್ತರಿಸಿರುವ ಚೆನ್ನೈನಲ್ಲಿ ಶುಕ್ರವಾರ ನೆರೆ ಇಳಿಮುಖವಾಗತೊಡಗಿದ್ದು, ಮಹಾನಗರ ನಿಧಾನವಾಗಿ ಅಪಾಯದಿಂದ ಹೊರಬರುತ್ತಿದೆ. ಆದರೆ ಚೆನ್ನೈ ಸೇರಿದಂತೆ ತಮಿಳುನಾಡಿನ ಹಲವೆಡೆ ಮಹಾಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಚರ್ಮರೋಗ, ಜ್ವರ, ಅತಿಸಾರ ಮತ್ತಿತರ ಸಮಸ್ಯೆಗಳಿಂದಾಗಿ ಜನರು ಆಸ್ಪತ್ರೆಗೆ ಧಾವಿಸುತ್ತಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ, ರಾಜ್ಯಾದ್ಯಂತ ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಅಪಾಯವಿದೆಯೆಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕಲ್ಮಶನೀರು, ಆಹಾರ ಸೇವನೆಯಿಂದಾಗಿ ಸಾಂಕ್ರಾಮಿಕರೋಗಳು ವ್ಯಾಪಿಸತೊಡಗಿವೆಯೆಂದು ಅವರು ತಿಳಿಸಿದ್ದಾರೆ. ಪ್ರವಾಹ ಸಂತ್ರಸ್ತರಿಗಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಲು ತಮಿಳುನಾಡು ಸರಕಾರ ಯೋಚಿಸುತ್ತಿದೆ. ಪ್ರವಾಹದ ನೀರಿನಲ್ಲಿ ದೀರ್ಘಕಾಲ ನಡೆದ ಕಾರಣ ಅನೇಕ ಮಂದಿಗೆ ಚರ್ಮರೋಗದ ಸೋಂಕು ತಗಲಿರುವುದಾಗಿ ತಿಳಿದುಬಂದಿದೆ.

ಚೆನ್ನೈ ಮಹಾನಗರದ ಕೆಲವು ಪ್ರದೇಶಗಳು ಇನ್ನೂ ಜಲಾವೃತಗೊಂಡಿದ್ದು, ಆಹಾರ, ನೀರು, ವಿದ್ಯುತ್ ಇಲ್ಲದೆ ಮನೆಯೊಳಗೆ ಸಿಲುಕಿ ಕೊಂಡಿರುವ ಸಂತ್ರಸ್ತರ ಹಾಹಾಕಾರ ಮುಗಿಲುಮುಟ್ಟಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಎಫ್)ಯು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಎನ್‌ಡಿಆರ್‌ಎಫ್‌ನ 20ಕ್ಕೂ ಅಧಿಕ ರಕ್ಷಣಾತಂಡಗಳು ಈತನಕ 10,589 ಮಂದಿಯನ್ನು ಸುರಕ್ಷತಾ ಸ್ಥಳಗಳಿಗೆ ರವಾನಿಸಿವೆ. ಆದರೆ ಚೆನ್ನೈ ಮಹಾನಗರದ ಹಲವು ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿಯತೊಡಗಿದ್ದು, ರಕ್ಷಣಾ ಹಾಗೂ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

ಎನ್‌ಡಿಆರ್‌ಎಫ್‌ನ 20 ತಂಡಗಳು, 131 ರಬ್ಬರ್ ದೋಣಿಗಳು ಹಾಗೂ ಜೀವರಕ್ಷಕ ಜಾಕೆಟ್‌ಗಳೊಂದಿಗೆ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯನ್ನು ಭರದಿಂದ ನಡೆಸುತ್ತಿವೆ. 45 ಮಂದಿ ನಿಷ್ಣಾತ ಮುಳುಗುಗಾರರು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ.

ಭೀಕರ ಪ್ರವಾಹದಿಂದ ತೀವ್ರವಾಗಿ ಬಾಧಿತವಾಗಿರುವ ಮನಲಿ, ಕುಟ್ಟಪುರಂ ಹಾಗೂ ಗ್ಲೋಬಲ್ ಹೆಲ್ತ್ ಸಿಟಿ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್‌ನ ಪರಿಹಾರತಂಡಗಳು 1,400 ಆಹಾರ ಪ್ಯಾಕೇಟ್‌ಗಳು, 2,300 ನೀರಿನ ಪೊಟ್ಟಣಗಳನ್ನು ಸಂತ್ರಸ್ತರಿಗೆ ವಿತರಿಸಿವೆ. ನಗರದ ಕೆಲವೆಡೆ ವಿದ್ಯುತ್ ಕಂಬಗಳು ಕುಸಿದುಬಿದ್ದು ವಿದ್ಯುತ್ ಹರಿಯುತ್ತಿರುವ ತಂತಿಗಳು ನೆರೆನೀರಿನಲ್ಲಿ ಮುಳುಗಿದ ಕಾರಣ, ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಮುಂಜಾಗರೂಕತಾ ಕ್ರಮವಾಗಿ ವಿದ್ಯುತ್ ಮಂಡಳಿಯು ವಿದ್ಯುತ್ ಪೂರೈಕೆಯನ್ನು ರದ್ದುಪಡಿಸಿತ್ತು.

ಚೆನ್ನೈ ನಗರದ ಮಧ್ಯೆ ಹರಿಯುವ ಅಡ್ಯಾರ್ ನದಿಯಲ್ಲಿ ಪ್ರವಾಹವು ಗಣನೀಯವಾಗಿ ತಗ್ಗಿದೆ. ನಗರದ ಕೆಲವು ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿಯಲಾರಂಭಿಸಿದ್ದು ಮತ್ತೆ ಆತಂಕವನ್ನು ಸೃಷ್ಟಿಸಿತು. ಆದರೆ ಅರ್ಧತಾಸಿನ ಬಳಿಕ ಮಳೆ ಮತ್ತೆ ನಿಂತಿದ್ದರಿಂದ ಪರಿಹಾರ ಕಾರ್ಯಾಚರಣೆಗಳು ಚುರುಕುಗೊಂಡವು.

ಏರ್‌ಇಂಡಿಯಾದ ಹಾಗೂ ಇತರ ಕೆಲವು ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಸೇರಿದ ಏಳು ವಿಮಾನಗಳು ಚೆನ್ನೈ ಸಮೀಪದ ಆರಕೋಣಂನಲ್ಲಿರುವ ರಾಜಾಲಿ ನೌಕಾಪಡೆಯ ವಾಯುನಿಲ್ದಾಣದಿಂದ ಹಾರಾಟ ನಡೆಸಿವೆ.ಕುಂಭದ್ರೋಣ ಮಳೆಯಿಂದಾಗಿ ಚೆನ್ನೈನ ವಿಮಾನನಿಲ್ದಾಣವು ಜಲಾವೃತಗೊಂಡಿದ್ದರಿಂದ ಮಂಗಳವಾರದಿಂದ ಅಲ್ಲಿ ಎಲ್ಲ ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ನಗರದಲ್ಲಿ ರೈಲು ಸಂಚಾರವನ್ನು ನಾಳೆಯವರೆಗೆ ಸ್ಥಗಿತಗೊಳಿಸಲಾಗಿದೆ.

ಹಾಲು,ತರಕಾರಿ ದುಬಾರಿ
ಹಾಲು, ತರಕಾರಿ ಹಾಗೂ ಆಹಾರವಸ್ತುಗಳ ದರವು ಗಗನಕ್ಕೇರಿದ್ದು, ಇಂದು ಕೂಡಾ ಕೆಲವೆಡೆ 1 ಲೀಟರ್ ಹಾಲು 100 ರೂ.ಗೆ ಮಾರಾಟವಾಗುತ್ತಿದೆ. 20 ರೂ.ಮುಖಬೆಲೆಯ ಒಂದು ಬಾಟಲಿ ಮಿನರಲ್ ನೀರನ್ನು 150 ರೂ.ಗೆ ಮಾರಲಾಗುತ್ತಿದೆ. ಟೊಮ್ಯಾಟೊ, ಬೀನ್ಸ್ ಮತ್ತಿತರ ತರಕಾರಿ ದರಗಳೂ ಗಗನಕ್ಕೇರಿದ್ದು ಪ್ರತಿ ಕೆ.ಜಿ.ಗೆ 80 ರೂ.ನಿಂದ 90 ರೂ.ವರೆಗೆ ಮಾರಾಟವಾಗುತ್ತಿದೆ.

ರಾಜ್ಯದ ನೆರವು ತ.ನಾ. ಪರಿಹಾರ ನಿಧಿಗೆ ಕಳುಹಿಸಲು ನಿರ್ಧಾರ
ಬೆಂಗಳೂರು: ಜಲ ಪ್ರಳಯ ಉಂಟಾಗಿ, ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ರಾಜ್ಯಸರಕಾರ ತಮಿಳುನಾಡಿಗೆ ಘೋಷಿಸಿದ್ದ ಆರ್ಥಿಕ ನೆರವನ್ನು ಸಿಎಂ ಜಯಲಲಿತಾ ತಿರಸ್ಕರಿಸಿದ್ದಾರೆ. ಆದರೆ ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವ ನೆರವನ್ನು ನೆರೆ ರಾಜ್ಯಕ್ಕೆ ರವಾನಿಸಲು ತೀರ್ಮಾನಿಸಿದೆ. ಅಧಿಕಾರಿಗಳು ಮೌಖಿಕವಾಗಿ ಆರ್ಥಿಕ ನೆರವು ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಸಂಕಷ್ಟದಲ್ಲಿರುವ ಜನರಿಗೆ ತನ್ನ ಕಳಕಳಿಯನ್ನು ಸರ್ಕಾರ ತೋರಲಿದೆ. ಮುಖ್ಯಮಂತ್ರಿ ಅವರ ಜಯಲಲಿತಾ ಅವರ ಪರಿಹಾರ ನಿಧಿಗೆ ಹಣ ಕಳುಹಿಸಲು ನಿರ್ಧರಿಸಿದೆ. ತಮಿಳುನಾಡು ಪರಿಹಾರದ ಚೆಕ್ ವಾಪಸ್ ಕಳುಹಿಸಿದರೆ ನಂತರ ಮುಂದಿನ ನಿರ್ಧಾರ ಕೈಗೊಳ್ಳೋಣ ಎನ್ನುವ ನಿಲುವಿಗೆ ಸರಕಾರ ಬಂದಿದೆ. ಸಂಕಷ್ಟದಲ್ಲಿರುವವರಿಗೆ ರಾಜ್ಯದ ವಿವಿಧ ಸಂಘ ಸಂಸ್ಥೆಗಳು, ಜನ ಸಮೂಹ, ಸರ್ಕಾರದ ವಿವಿಧ ಇಲಾಖೆಗಳು, ಆರೋಗ್ಯ ತಂಡ, ವಿಪತ್ತು ಪರಿಹಾರ ತಂಡಗಳು ಸಂಕಷ್ಟದಲ್ಲಿರುವವರ ರಕ್ಷಣೆಗೆ ಧಾವಿಸುತ್ತಿವೆ. ಪರಿಹಾರ ನೆರವು ನೀಡಿರುವ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸ್ಪಷ್ಟನೆ ನೀಡಿರುವ ತಮಿಳುನಾಡು ಸರಕಾರದ ಅಧಿಕಾರಿಗಳು, ಈಗಾಗಲೇ ಕೇಂದ್ರ ಸರ್ಕಾರ ಅಗತ್ಯ ನೆರವನ್ನು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರಗಳ ಪರಿಹಾರದ ನೆರವು ಸದ್ಯಕ್ಕೆ ಬೇಡ. ಒಂದು ವೇಳೆ ಪರಿಹಾರ ಅಗತ್ಯವಿದ್ದರೆ ಮುಂದೆ ಖಂಡಿತ ಸಂಪರ್ಕಿಸಿ ಪರಿಹಾರ ಪಡೆದು ಕೊಳ್ಳುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೂ ದೂರವಾಣಿ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಕರ್ನಾಟಕ ಕೊಡಲು ಮುಂದಾಗಿರುವ ಐದು ಕೋಟಿ ರೂ.ಗಳ ನೆರವನ್ನು ಸ್ವೀಕರಿಸದಂತೆ ಸಿಎಂ ಜಯಲಲಿತಾ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ರಾಜ್ಯದ ಉನ್ನತಾಧಿಕಾರಿಗಳಿಗೆ ನೇರವಾಗಿ ಹೇಳಿದ್ದಾರೆ. ಮಾನವೀಯ ನೆರವು ನಿರಾಕರಣೆ ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಯಾವುದೇ ರಾಜ್ಯ ಪ್ರಕೃತಿ ವಿಕೋಪದಿಂದ ತಲ್ಲಣಗೊಂಡರೂ ನಾವು ತಕ್ಷಣವೇ ಅದಕ್ಕೆ ಸ್ಪಂದಿಸಿದ್ದೇವೆ. ಹಣ ಮಾತ್ರವಲ್ಲದೆ, ವೈದ್ಯಕೀಯ ನೆರವು ಸೇರಿದಂತೆ ಹಲ ಬಗೆಯ ನೆರವನ್ನು ನೀಡಿದ್ದೇವೆ. ಆದರೆ ಇದೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ನೀಡಿದ ನೆರವನ್ನು ಜಯಲಲಿತಾ ನಿರಾಕರಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಕಾವೇರಿ ಜಲವಿವಾದ ಇದ್ದರೂ ಅದು ನ್ಯಾಯಾಲಯದಲ್ಲಿ ಇತ್ಯರ್ಥವಾಗುವ ವಿಷಯ. ಹೀಗಾಗಿ ಮುಂದಿನ ದಿನಗಳಲ್ಲಿ ಕಾವೇರಿ ವಿವಾದ ಭುಗಿಲೇಳಬಹುದು ಎಂಬ ಕಾರಣಕ್ಕಾಗಿ ಕರ್ನಾಟಕ ಮಾನವೀಯ ನೆಲೆಯಲ್ಲಿ ನೆರವು ನೀಡಲು ಮುಂದಾಗಿದ್ದನ್ನು ತಿರಸ್ಕರಿಸುವುದು ಸರಿಯಲ್ಲ ಎಂಬ ಭಾವನೆ ಹಲವರಿಂದ ವ್ಯಕ್ತವಾಗಿದೆ.

ಚೆನ್ನೈ ಸೇರಿದಂತೆ ಹಲವೆಡೆ ಜಲಪ್ರಳಯವಾದ ಬೆನ್ನಲ್ಲಿ ಅಲ್ಲಿನ ಜನ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ. ಆದರೆ ಯಾರನ್ನೂ ರಾಜ್ಯ ತಡೆಯುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾದುದು ಜನರ ಬದುಕು. ಈ ದೇಶದ ಯಾವುದೇ ಪ್ರಜೆ ತನಗಿಚ್ಚೆ ಬಂದಲ್ಲಿ ವಾಸಿಸಬಹುದು. ಹೀಗಾಗಿ ಪ್ರಕೃತಿ ವಿಕೋಪದ ಭೀಕರತೆಗೆ ತುತ್ತಾದ ಕೂಡಲೇ ತಮಿಳ್ನಾಡಿನ ಲಕ್ಷಾಂತರ ಜನ ಕರ್ನಾಟಕಕ್ಕೆ ವಲಸೆ ಬಂದಿದ್ದು ಇದರಲ್ಲಿ ಬಹುತೇಕರು ವಾಪಸ್ಸಾಗಬಹುದಾದರೂ ಕೆಲ ಸಾವಿರ ಮಂದಿಯಾದರೂ ಖಾಯಂ ಆಗಿ ಕರ್ನಾಟಕದಲ್ಲೇ ನೆಲೆಸುವ ಸಾಧ್ಯತೆಗಳಿವೆ. ಹೀಗೆ ಉಭಯ ರಾಜ್ಯಗಳ ನಡುವೆ ನೀರಿನ ವಿವಾದ ಇದ್ದರೂ ಅದನ್ನು ಇಂತಹ ಸಂದರ್ಭದಲ್ಲಿ ನೆನಪಿಸಿಕೊಂಡು, ನೆರವು ನಿರಾಕರಿಸುವುದು ಸರಿಯಲ್ಲ ಎಂಬ ಭಾವನೆ ಹಲವೆಡೆಗಳಿಂದ ವ್ಯಕ್ತವಾಗಿದ್ದು ಈ ಅಂಶ ಭಾರೀ ವಿವಾದಕ್ಕೆ ಕಾರಣವಾಗಿದೆ.
***
ರಾಜ್ಯ ಸರಕಾರ ಈಗಾಗಲೇ ಘೋಷಿಸಿರುವಂತೆ ಐದು ಕೋಟಿ ರೂ. ನೆರವನ್ನು ತಮಿಳುನಾಡಿಗೆ ರವಾನಿಸಲು ನಿರ್ಧರಿಸಿದೆ. ಚೆಕ್‌ನ್ನು ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳುಹಿಸುತ್ತೇವೆ
ಕೌಶಿಕ್ ಮುಖರ್ಜಿ, ಮುಖ್ಯಕಾರ್ಯದರ್ಶಿ

***
ಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡ ಕೂಡಾ,ಈ ರೀತಿ ಕರ್ನಾಟಕ ನೆರವು ನೀಡಲು ಮುಂದಾಗಿದ್ದನ್ನು ತಮಿಳುನಾಡು ನಿರಾಕರಿಸಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.
ಮಾನವೀಯ ನೆಲೆಯಲ್ಲಿ, ನೊಂದವರಿಗೆ ಬೆಂಬಲ ನೀಡಬೇಕೆಂಬ ಕಾರಣಕ್ಕಾಗಿ ಈ ರೀತಿಯ ನೆರವು ನೀಡಲಾಗಿದೆ.ಹೀಗೆ ನೆರವಿನ ಹಸ್ತ ಚಾಚಿದರೂ ಅದನ್ನು ತಮಿಳುನಾಡು ನಿರಾಕರಿಸಿದ್ದು ಸರಿಯಲ್ಲ ಎಂದು ದೇವೇಗೌಡರು ಮುಖ್ಯಮಂತ್ರಿ ಜಯಲಲಿತಾ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
***
ಚೆನ್ನೈ: ವಿದ್ಯುತ್ ಸ್ಥಗಿತ; ಆಕ್ಸಿಜನ್ ಸಿಗದೆ ಆಸ್ಪತ್ರೆಯಲ್ಲಿ 18 ರೋಗಿಗಳ ಸಾವು
ಚೆನ್ನೈ, ಡಿ.4: ಪ್ರವಾಹ ಪೀಡಿತ ಚೆನ್ನೈ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನೆರೆನೀರು ಜನರೇಟರ್ ಕೊಠಡಿಗೆ ನುಗ್ಗಿದ ಪರಿಣಾಮವಾಗಿ ವಿದ್ಯುತ್ ಪೂರೈಕೆ ಕಡಿತಗೊಂಡಿದ್ದರಿಂದ ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿ 18 ರೋಗಿಗಳು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸುವುದಾಗಿ ರಾಜ್ಯ ಸರಕಾರ ಶುಕ್ರವಾರ ಪ್ರಕಟಿಸಿದೆ.
ನಗರದ ಮಾನಪಕ್ಕಮ್‌ನಲ್ಲಿ ಅಡ್ಯಾರ್ ನದಿಯ ದಂಡೆಯಲ್ಲಿರುವ ಈ ಆಸ್ಪತ್ರೆಯ ಆವರಣದಲ್ಲಿ ಗುರುವಾರ ನೆರೆನೀರು ನುಗ್ಗಿತು. ವಿದ್ಯುತ್ ಪೂರೈಕೆ ಕಡಿತಗೊಂಡಿದ್ದರಿಂದ ಈ ಆಸ್ಪತ್ರೆಯು ಜನರೇಟರ್‌ನ್ನು ಬಳಸಿಕೊಂಡಿತ್ತು.
ಆದರೆ ಜನರೇಟರ್ ಕೊಠಡಿಗೂ ಪ್ರವಾಹ ನುಗ್ಗಿದ ಪರಿಣಾಮವಾಗಿ ಜನರೇಟರ್ ಕೂಡಾ ವಿಫಲಗೊಂಡಿತ್ತು. ಇದರ ಪರಿಣಾಮವಾಗಿ ಕೃತಕ ಉಸಿರಾಟ ವ್ಯವಸ್ಥೆಗೆ ಒಳಪಡಿಸಿದ್ದ ರೋಗಿಗಳಿಗೆ ಆಮ್ಲಜನಕ ಪೂರೈಕೆ ಸ್ಥಗಿತಗೊಂಡಿತೆಂದು ಮೃತರ ಬಂಧುಗಳು ಹೇಳಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆಯ ಅಡಳಿತವು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ದುರಂತ ಸಂಭವಿಸಿದ ಆಸ್ಪತ್ರೆಯಲ್ಲಿ 75 ಮಂದಿ ರೋಗಿಗಳು ತೀವ್ರ ನಿಗಾ ಘಟಕದಲ್ಲಿದ್ದರು. ಅವರಲ್ಲಿ ಕೃತಕ ಉಸಿರಾಟ ವ್ಯವಸ್ಥೆಗೊಳಪಟ್ಟಿದ್ದ 57 ಮಂದಿ ರೋಗಿಗಳನ್ನು ಹೊರಗೆ ಕಳುಹಿಸಲಾಗಿತ್ತು. ಉಳಿದ ರೋಗಿಗಳು ಕಳೆದ ಎರಡು ದಿನಗಳಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಅವರು ವಿದ್ಯುತ್ ವೈಫಲ್ಯದಿಂದಾಗಿ ಸಾವನ್ನಪ್ಪಿದ್ದಾರೆಂಬುದನ್ನು ಸದ್ಯಕ್ಕೆ ತೀರ್ಮಾನಿಸಲು ಸಾಧ್ಯವಿಲ್ಲವೆಂದು ತಮಿಳುನಾಡು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ತಿಳಿಸಿದ್ದಾರೆ. ಈ ಆಸ್ಪತ್ರೆಯಿಂದ ಒಟ್ಟು 575 ರೋಗಿಗಳನ್ನು ಬೇರೆಡೆಗೆ ರವಾನಿಸಲಾಗಿತ್ತೆಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 18 ರೋಗಿಗಳ ಶವಗಳನ್ನು ನಗರದ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಈ ಮಧ್ಯೆ ವಿದ್ಯುತ್ ಆಘಾತ ಹಾಗೂ ಮಳೆಯಿಂದ ಸಂಭವಿಸಿದ ವಿವಿಧ ಅವಘಡಗಳಿಂದಾಗಿ ಮೃತಪಟ್ಟ 27 ಮಂದಿಯ ಮೃತದೇಹಗಳನ್ನು ಸರಕಾರಿ ಆಸ್ಪತ್ರೆಯಲ್ಲಿರಿಸಲಾಗಿದೆ.

Write A Comment