ಕರ್ನಾಟಕ

ಎತ್ತಿನಹೊಳೆ ಜಾರಿಗೆ ಬದ್ಧ: ಸಿಎಂ; ಬಯಲುಸೀಮೆಗೆ ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ರಾಜ್ಯ ಸರಕಾರ ಹಿಂದೆ ಸರಿಯುವುದಿಲ್ಲ

Pinterest LinkedIn Tumblr

CMCM____________ಬೆಂಗಳೂರು, ಡಿ.4: ಎತ್ತಿನ ಹೊಳೆ ಯೋಜನೆಗೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಡಿ.18ರಂದು ತನ್ನ ನಿರ್ಧಾರ ಪ್ರಕಟಿಸಲಿದ್ದು, ಅಲ್ಲಿಯವರೆಗೆ ರಾಜ್ಯ ಸರಕಾರ ಯಾವುದೇ ಕಾಮಗಾರಿಯನ್ನು ಮುಂದುವರಿಸದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದೆ.

ಶುಕ್ರವಾರ ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಎತ್ತಿನ ಹೊಳೆ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉಭಯ ಸದನಗಳ ಸರ್ವಪಕ್ಷ ನಾಯಕರ ಜತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು.

ಈ ವೇಳೆ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಎತ್ತಿನ ಹೊಳೆ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸರಕಾರದ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಯೋಜನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಹಿಂದೆ ಸರಿಯುವುದಿಲ್ಲ ಎಂದಿರುವ ಅವರು, ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಹಾಗೂ ಕಾನೂನಾತ್ಮಕ ತೊಡಕುಗಳನ್ನು ಎಚ್ಚರಿಕೆಯಿಂದ ನಿಭಾಯಿಸಲಾಗುವುದು ಎಂದಿದ್ದಾರೆ.

ಎತ್ತಿನ ಹೊಳೆ ಯೋಜನೆಗೆ ಈಗಾಗಲೇ ಪರಿಸರ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೆ, ನೀರನ್ನು ಮೇಲೆತ್ತುವ ಏತ ಅಳವಡಿಕೆ ಜಾಗದಲ್ಲಿ ಅರಣ್ಯ ಇಲಾಖೆಯ 14 ಹೆಕ್ಟೇರ್ ಭೂಮಿ ಮಾತ್ರ ಬಳಕೆಯಾಗಲಿದ್ದು, ಅನುಮತಿ ನೀಡುವಂತೆ ಕೇಂದ್ರ ಸರಕಾರದ ಅರಣ್ಯ ಇಲಾಖೆಗೆ ರಾಜ್ಯ ಸರಕಾರ ಈಗಾಗಲೇ ಮನವಿ ಸಲ್ಲಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಮನವಿ ಪರಿಶೀಲನೆಯನ್ನು ಅರಣ್ಯ ಇಲಾಖೆ ಡಿ.18ಕ್ಕೆ ನಿಗದಿಪಡಿಸಿದೆ. ಹೀಗಾಗಿ ಡಿ.7ರಂದು ಹಸಿರು ಪೀಠದಲ್ಲಿ ನಡೆಯಲಿರುವ ವಿಚಾರಣೆಯ ವೇಳೆ ಅರಣ್ಯ ಇಲಾಖೆಯ ಅನುಮತಿ ಸಿಗುವವರೆಗೂ ಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದುವರಿಸದೆ, ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದಾಗಿ ಹಸಿರು ಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ಯೋಜನೆಗೆ ಹಸಿರು ಪೀಠ ತಡೆಯಾಜ್ಞೆ ನೀಡುವ ಆತಂಕವಿದ್ದು, ಅರಣ್ಯ ಇಲಾಖೆಯಿಂದ ಅನುಮತಿ ಸಿಗುವವರೆಗೂ ತಡೆಯಾಜ್ಞೆ ನೀಡದಂತೆ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.

ಯೋಜನೆಗೆ ಕೇವಲ 14 ಹೆಕ್ಟೇರ್ ಮಾತ್ರ ಅರಣ್ಯ ಭೂಮಿ ಬಳಕೆಯಾಗಲಿದ್ದು, ಅರಣ್ಯ ಇಲಾಖೆಯ ಪ್ರಾದೇಶಿಕ ಕಚೇರಿಯಲ್ಲಿ ಅನುಮತಿ ಸಿಗುವ ಸಾಧ್ಯತೆಯಿದೆ. ಅನುಮತಿ ದೊರೆತ ಬಳಿಕ ನ್ಯಾಯಾಲಯದ ಮುಂದೆ ಎಲ್ಲವನ್ನೂ ವಿವರಿಸಿ ತಡೆಯಾಜ್ಞೆಯನ್ನು ತೆರವುಗೊಳಿಸಿ ಕಾಮಗಾರಿಯನ್ನು ಮುಂದುವರಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನ್ಯಾಯಾಲಯದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಕಾನೂನು ಸಚಿವರ ಅಭಿಪ್ರಾಯದಂತೆ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದ್ದು, ಕಾನೂನು ವಿಚಾರಗಳ ಬಗ್ಗೆ ರಾಜ್ಯದ ವಕೀಲರು ಹಾಗೂ ಅಡ್ವೊಕೇಟ್ ಜನರಲ್ ಅವರು ಸಭೆಗೆ ಸಂಪೂರ್ಣ ವಿವರ ನೀಡಿದ್ದಾರೆ ಎಂದು ಪಾಟೀಲ್ ವಿವರಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಯೋಜನೆಯನ್ನು ವಿರೋಧಿಸುತ್ತಿರುವ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಯ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಫಲಾನುಭವಿ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ಗೊಂದಲ ನಿವಾರಣೆಗೆ ಮುಂದಾಗಬೇಕು ಎಂದು ಸಿಎಂಗೆ ಸಲಹೆ ನೀಡಿದರು. ಸಲಹೆಯನ್ನು ಅಂಗೀಕರಿಸಿದ ಅವರು, ಶೀಘ್ರದಲ್ಲಿ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಭೆಯಲ್ಲಿ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ಎತ್ತಿನ ಹೊಳೆ ವಿವಾದದ ಹಿನ್ನೆಲೆ: ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರಗಳಿಗೆ 8 ಟಿಎಂಸಿ ಸೇರಿದಂತೆ ತುಮಕೂರು, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ರಾಮನಗರ ಜಿಲ್ಲೆಗಳಿಗೆ 4 ಟಿಎಂಸಿ ನೀರು ಪೂರೈಸುವ 13 ಸಾವಿರ ಕೋಟಿ ರೂ. ವೆಚ್ಚದ ಎತ್ತಿನ ಹೊಳೆ ಯೋಜನೆಗೆ ರಾಜ್ಯ ಸರಕಾರ ಚಾಲನೆ ನೀಡಿದೆ.

ಪ್ರಕರಣವನ್ನು ವಿಚಾರಣೆ ನಡೆಸಿದ ಚೆನ್ನೈನಲ್ಲಿನ ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಅರಣ್ಯ ಇಲಾಖೆಯ ಅನುಮತಿ ಪಡೆಯುವವರೆಗೂ ಕಾಮಗಾರಿ ಮುಂದುವರಿಸದಂತೆ ರಾಜ್ಯ ಸರಕಾರಕ್ಕೆ ಸೂಚನೆ ನೀಡಿತ್ತು. ಮುಂದಿನ ವಿಚಾರಣೆ ಡಿ.7ರ ವೇಳೆಗೆ ರಾಜ್ಯ ಸರಕಾರ ತನ್ನ ನಿಲುವನ್ನು ಪ್ರಕಟಿಸಬೇಕಿದ್ದು, ಇಲ್ಲದಿದ್ದಲ್ಲಿ ಹಸಿರು ಪೀಠದಿಂದ ಯೋಜನೆಯ ಕಾಮಗಾರಿಗೆ ತಡೆಯಾಜ್ಞೆ ಸಿಗುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Write A Comment