ಬೆಂಗಳೂರು, ಡಿ.1 ಕುಡಿದ ಮತ್ತಿನಲ್ಲಿ ಕರ್ತವ್ಯ ನಿರತ ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ಕಿರುತೆರೆ ನಟ ರಕ್ಷಿತ್ನನ್ನು ಕಲಾಸಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಮಹೇಶ್ ಖ್ಯಾತಿಯ ನಟ ರಕ್ಷಿತ್ ರಾತ್ರಿ ಕುಡಿದು ವಾಹನ ಚಾಲನೆ ಮಾಡುವಾಗ ತಪಾಸಣೆ ನಡೆಸಲು ಕಾರ್ ತಡೆದ ಸಂಚಾರಿ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ವಾಗ್ವಾದ ನಡೆಸಿದ್ದಾರೆ.
ಕಲಾಸಿಪಾಳ್ಯ ಠಾಣೆ ವ್ಯಾಪ್ತಿಯ ಮಿನರ್ವಮಿಲ್ ವೃತ್ತದ ಬಳಿ ರಾತ್ರಿ ಕೆ.ಆರ್.ಮಾರ್ಕೆಟ್ ಸಂಚಾರ ಠಾಣೆ ಪಿಎಸ್ಐ ನಾಗರಾಜ್ ಮತ್ತು ಸಿಬ್ಬಂದಿ ಕುಡಿದು ವಾಹನ ಚಾಲನೆ ಮಾಡುವ ಚಾಲಕರ ಬಗ್ಗೆ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕುಡಿದು ಕಾರ್ ಚಾಲನೆ ಮಾಡಿಕೊಂಡು ಕಿರುತೆರೆ ನಟ ರಕ್ಷಿತ್ ಅದೇ ಮಾರ್ಗವಾಗಿ ಬಂದಿದ್ದಾರೆ.
ಕಾರನ್ನು ಪಿಎಸ್ಐ ನಾಗರಾಜ್ ಅವರು ತಡೆದು ತಪಾಸಣೆಗೆ ಮುಂದಾದಾಗ ನಟ ರಕ್ಷಿತ್ ನಾನು ಯಾರು ಗೊತ್ತೆ? ಉದ್ಯಮಿ ಗಂಗಾಧರ್ ಅವರ ಮಗ ಎನ್ನುತ್ತಾ ವಾಗ್ವಾದ ನಡೆಸಿ ಅನುಚಿತವಾಗಿ ವರ್ತಿಸಿದ್ದಾರೆ. ತಪಾಸಣೆ ವೇಳೆ ಅತಿಯಾಗಿ ಮದ್ಯಪಾನ ಮಾಡಿದ್ದ ರಕ್ಷಿತ್ನನ್ನು ಕಾರ್ನಿಂದ ಇಳಿಸಲು ಪೊಲೀಸರು ಪ್ರಯಾಸಪಟ್ಟಿದ್ದಾರೆ. ನಂತರ ಸಂಚಾರ ಪೊಲೀಸರು ಅನುಚಿತ ವರ್ತನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಟನ ವಿರುದ್ಧ ಕಲಾಸಿಪಾಳ್ಯ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕಲಾಸಿಪಾಳ್ಯ ಠಾಣೆ ಪೊಲೀಸರು ಕಿರುತೆರೆ ನಟನನ್ನು ಬಂಧಿಸಿದ್ದಾರೆ.
