ಪಾಟ್ನಾ, ನ.24: ಮೂವರು ಸಹೋದರರು ತೋರಿಸಿದ ಸಮಯ ಪ್ರಜ್ಞೆ ಮತ್ತು ಸಕಾಲಿಕ ಕ್ರಮದಿಂದಾಗಿ ಪಾಟ್ನಾ ಸಮೀಪದ ಮೋಕಮ ನಿಲ್ದಾಣದಲ್ಲಿ ಸಂಭಾವ್ಯ ಬೃಹತ್ ರೈಲು ಅಪಘಾತವೊಂದು ತಪ್ಪಿದೆ.
ಈ ಮೂವರು ಸಹೋದರರು ರೈಲು ನಿಲ್ದಾಣದ ಪ್ಲಾಟ್ಫಾರಂನಲ್ಲಿ ಸ್ಥಳೀಯ ರೈಲೊಂದಕ್ಕಾಗಿ ಕಾಯುತ್ತಿದ್ದರು.
ಆಗ 1,000ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತ ದಿಬ್ರೂಗಢ-ಹೊಸದಿಲ್ಲಿ ರಾಜಧಾನಿ ಎಕ್ಸ್ಪ್ರೆಸ್ ಅಲ್ಲಿಗೆ ಧಾವಿಸುತ್ತಿತ್ತು. ಆಗ ಆ ಸಹೋದರರ ಪೈಕಿ ಒಬ್ಬ ಹಳಿಯಲ್ಲಿ ಒಂದು ಮೀಟರ್ ಉದ್ದದ ಅಂತರವನ್ನು ಕಂಡರು. ಈ ರೈಲಿಗೆ ಆ ನಿಲ್ದಾಣದಲ್ಲಿ ನಿಲುಗಡೆಯಿರಲಿಲ್ಲ. ಬೃಹತ್ ಪ್ರಮಾಣದ ಅಪಘಾತವೊಂದಕ್ಕೆ ಕ್ಷಣಗಣನೆಯಾಗುತ್ತಿತ್ತು!
ಎಕ್ಸ್ಪ್ರೆಸ್ ರೈಲು ಆಗಮಿಸಲು ಕೆಲವೇ ನಿಮಿಷಗಳಿದ್ದವು ಹಾಗೂ ಸನಿಹದಲ್ಲಿ ರೈಲ್ವೆ ಸಿಬ್ಬಂದಿ ಯಾರೂ ಇರಲಿಲ್ಲ. ಕೂಡಲೇ ಕಾರ್ಯಾಚರಣೆಗಿಳಿದ ಸಹೋದರರು ಒಂದು ಟಾರ್ಚ್ ಮತ್ತು ಕೆಂಪು ಬಣ್ಣದ ಬೈರಾಸನ್ನು ಬೀಸುತ್ತಾ ರೈಲಿನ ಚಾಲಕನಿಗೆ ತುರ್ತು ಸಂದೇಶ ತಲುಪಿಸಲು ಪ್ರಯತ್ನಿಸಿದರು.
ಈ ಸಂದೇಶ ನೋಡಿದ ಚಾಲಕ ತುರ್ತು ಬ್ರೇಕ್ಗಳನ್ನು ಒತ್ತಿದರು ಹಾಗೂ ಬಿರುಕಿಗಿಂತ ಕೆಲವೇ ಅಡಿಗಳಷ್ಟು ದೂರದಲ್ಲಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಕಮಲಾ-ಗಂಗಾ ಇಂಟರ್ ಸಿಟಿ ಎಕ್ಸ್ಪ್ರೆಸ್ ಆ ಹಳಿಯಲ್ಲಿ ಸಾಗಿದ ಬಳಿಕ ಹಳಿಯ ಒಂದು ತುಂಡು ಕಾಣೆಯಾಗಿರಬೇಕೆಂದು ಪ್ರಾಥಮಿಕ ತನಿಖೆಯ ಬಳಿಕ ಶಂಕಿಸಲಾಯಿತು. ಇದಕ್ಕೆ ನಿಖರ ಕಾರಣ ಕಂಡುಹಿಡಿಯಲು ರೈಲ್ವೆ ಅಧಿಕಾರಿಗಳು ಆದೇಶ ನೀಡಿದ್ದಾರೆ. ಈ ನಡುವೆ, ಈ ಧೀರ ಸಹೋದರರನ್ನು ಸನ್ಮಾನಿಸಲು ರೈಲ್ವೆ ಪೊಲೀಸರು ನಿರ್ಧರಿಸಿದ್ದಾರೆ.