ಕರ್ನಾಟಕ

ಜಾಗತಿಕ ಹೂಡಿಕೆದಾರರ ಸಮಾವೇಶ; ಒಪ್ಪಂದಗಳಿಗೆ ಅನುಗುಣವಾಗಿ ಬಂಡವಾಳ ಹೂಡಿಕೆ: ಸಿದ್ದರಾಮಯ್ಯ

Pinterest LinkedIn Tumblr

cm2_ಬೆಂಗಳೂರು, ನ.24: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದಗಳಿಗೆ ಸಹಿ ಹಾಕುವುದು ಮುಖ್ಯವಲ್ಲ. ಬದಲಾಗಿ ಮಾಡಿಕೊಳ್ಳುವ ಒಪ್ಪಂದಗಳಿಗೆ ಅನುಗುಣವಾಗಿ ಬಂಡವಾಳ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ-2016ರ ಉನ್ನತಾಧಿಕಾರ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಹಿಂದೆ 2012ರಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಏಳು ಲಕ್ಷ ಕೋಟಿ ರೂ.ಮೊತ್ತದ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಆದರೆ, ಹೂಡಿಕೆಯಾದ ಬಂಡವಾಳ ಎಷ್ಟು? ಆ ರೀತಿ ಈ ಬಾರಿಯ ಸಮಾವೇಶದಲ್ಲಿ ಆಗಬಾರದು ಎಂದು ಅವರು ಹೇಳಿದರು.
ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವಿವಿಧ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಬಳಿಕ ಆ ಕಂಪೆನಿಗಳಿಗೆ ತನ್ನ ಘಟಕಗಳನ್ನು ಆರಂಭಿಸಲು ಮೂಲ ಸೌಕರ್ಯ ಒದಗಿ ಸುವ ಬಗ್ಗೆ ಯೋಚಿಸುವುದು ಸರಿಯಲ್ಲ. ಮೊದಲೇ ಎಲ್ಲ ಸೌಕರ್ಯಗಳನ್ನು ಸಿದ್ಧ ಮಾಡಿಕೊಡಬೇಕು. ಆ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು ಎಂದು ಮುಖ್ಯಮಂತ್ರಿ ತಾಕೀತು ಮಾಡಿದರು.
ಯಾವುದೇ ಕಂಪೆನಿ ತನ್ನ ಘಟಕ ಆರಂಭಿಸಲು ಮುಂದಾದರೆ ಒಪ್ಪಂದ ಮಾಡಿಕೊಳ್ಳುವ ಮೊದಲೇ ಆ ಕಂಪೆನಿಗೆ ನೀರು, ವಿದ್ಯುತ್, ಭೂಮಿ ಸಿದ್ಧ ವಾಗಿರಬೇಕು. ಈ ವಿಚಾರದಲ್ಲಿ ಅನಗತ್ಯ ವಿಳಂಬ ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಸಂಪುಟ ಸಭೆಗೆ ತನ್ನಿ:
ಎಲ್ಲ್ಲ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅನುಕೂಲವಾಗುವಂತೆ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸರಕಾರದ ಭೂಮಿಯನ್ನು ಡಿ.15ರೊಳಗೆ ಹಸ್ತಾಂತರ ಮಾಡಬೇಕು. ಭೂಮಿ ಹಸ್ತಾಂತರ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಬೇಕು. ಈ ವಿಷಯವು ಸಚಿವ ಸಂಪುಟದ ಸಹಿನ್ನಿತ ಸಭೆಯಲ್ಲಿ ಮಂಡನೆಯಾಗಬೇಕು.

ಈ ಬಗ್ಗೆ ಯಾವುದೇ ನೆಪ ಹೇಳುವಂತಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಿದ್ಧತೆಯನ್ನು ಸಮರೋಪಾದಿ ಯಲ್ಲಿ ಕೈಗೊಳ್ಳಬೇಕು. ಪ್ರಚಾರವೂ ಭರದಿಂದ ಸಾಗಬೇಕು. ಈ ಬಗ್ಗೆ ಈಗಾಗಲೇ ಸಾಕಷ್ಟು ಸಭೆಗಳಾಗಿವೆ. ದಿಲ್ಲಿ ಹಾಗೂ ಮುಂಬೈಗಳಲ್ಲಿ ರೋಡ್ ಶೋ ನಡೆದಿದೆ. ಹೈದರಾಬಾದ್‌ನಲ್ಲಿ ನ.25 ಹಾಗೂ ಚೆನ್ನೈನಲ್ಲಿ ಡಿ.25ರಂದು ರೋಡ್ ಶೋ ನಡೆಯಲಿದೆ. ರಾಜ್ಯದ ಒಳಗೆ, ಹೊರಗೆ ಮತ್ತು ವಿದೇಶಗಳಲ್ಲಿಯೂ ಪ್ರಚಾರ ಬಿರುಸಿನಿಂದ ನಡೆಯಬೇಕು. ಉದ್ಯಮಿಗಳನ್ನು ಆಕರ್ಷಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ವಾತಾವರಣ ಇದೆ. ಈ ವಿಷಯದಲ್ಲಿ ಕರ್ನಾಟಕ ಎರಡನೆ ಸ್ಥಾನದಲ್ಲಿದೆ. ಆದರೂ ಇಲ್ಲಿ ಕೈಗಾರಿಕೆಗಳಿಗೆ ನೀರು ಮತ್ತು ವಿದ್ಯುತ್ ಲಭ್ಯವಿಲ್ಲ ಎಂದು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕೆ ಕಿವಿಗೊಡಬೇಡಿ. ಉದ್ಯಮಿಗಳಿಗೆ ಎಲ್ಲವನ್ನೂ ವಿವರಿಸಿ ಅವರು ಬಂಡವಾಳ ಹೂಡಿಕೆ ಮಾಡುವಂತೆ ಮನವೊಲಿಸಿ ಎಂದು ಮುಖ್ಯಮಂತ್ರಿ ತಿಳಿಸಿದರು. ನಿಮ್ಮಿಂದಿಗೆ ನಾವಿದ್ದೇವೆ: ಸಭೆಯಲ್ಲಿ ಭಾಗವಹಿಸಿದ್ದ ಉದ್ಯಮಿಗಳು, ಕೈಗಾರಿಕೆ ವಲಯದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ನಾವೆಲ್ಲಾ ಸರಕಾರದ ಜೊತೆ ಇದ್ದೇವೆ. ಎಲ್ಲರೂ ಸೇರಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಗೊಳಿಸೋಣ ಎಂದರು.
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ .ದೇಶಪಾಂಡೆ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮೂಲಸೌಲಭ್ಯ, ಹಜ್ ಹಾಗೂ ವಾರ್ತಾ ಸಚಿವ ಆರ್. ರೋಷನ್‌ಬೇಗ್, ಕೃಷಿ ಸಚಿವ ಕೃಷ್ಣ ಬೈರೇಗೌಡ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Write A Comment