ಮಂಗಳೂರು, ನ.18: ರಾಜ್ಯದ ಬಹುತೇಕ ಜಿಲ್ಲಾಸ್ಪತ್ರೆಗಳಲ್ಲಿ ವೆಂಟಿಲೇಟರ್ ಸಮಸ್ಯೆ ಕಾಡುತ್ತಿರುವುದರಿಂದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಐಸಿಯುನೊಂದಿಗೆ ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ನಗರದ ಸರ್ಕ್ಯೂಟ್‌ಹೌಸ್‌ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮುಖ್ಯವಾಗಿ ನಗರ ಪ್ರದೇಶಗಳ ಜಿಲ್ಲಾ ಆಸ್ಪತ್ರೆಗಳಲ್ಲಿ 6ರಿಂದ 10 ಬೆಡ್‌ಗಳ ಐಸಿಯುನೊಂದಿಗೆ ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲಾಗುವುದು. ಪ್ರಸ್ತುತ ಯಾದಗಿರಿ, ರಾಮನಗರ ಮೊದಲಾದ ಜಿಲ್ಲಾಸ್ಪತ್ರೆಗಳಲ್ಲಿ ಐಸಿಯು ಸೌಲಭ್ಯ ಇಲ್ಲ. ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಈ ವ್ಯವಸ್ಥೆ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಜನವರಿಯೊಳಗೆ ಒಟ್ಟು 22.37 ಕೋಟಿ ರೂ. ವೆಚ್ಚದಲ್ಲಿ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಐಸಿಯು ವ್ಯವಸ್ಥೆಗೊಳಿಸಲಾಗುವುದು. ಬಳಿಕ ತಾಲೂಕು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುವುದು ಎಂದವರು ಹೇಳಿದರು. ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ 10.3 ಕೋಟಿ ರೂ. ವೆಚ್ಚದಲ್ಲಿ 11 ಬೆಡ್‌ಗಳಿರುವ ಐಸಿಯುವನ್ನು 30 ಬೆಡ್‌ಗಳ ಐಸಿಯುವನ್ನಾಗಿ ಪರಿರ್ವತಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಐಆರ್- ಸಿಟಿಸ್ಕಾನ್ ಸೌಲಭ್ಯ:
ಎಂಆರ್‌ಐ ಹಾಗೂ ಸಿಟಿಸ್ಕಾನ್ ಸೌಲಭ್ಯಗಳು ಬಡ ರೋಗಿಗಳಿಗೆ ಕೈಗೆಟಕುವ ದರದಲ್ಲಿ ದೊರಕುವಂತಾಗಬೇಕು ಎಂಬ ಉದ್ದೇಶದಿಂದ ಎಚ್‌ಎಲ್‌ಎಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಶೀಘ್ರದಲ್ಲೇ ಇದು ಆರಂಭಗೊಳ್ಳಲಿದೆ ಎಂದು ಸಚಿವ ಖಾದರ್ ಈ ಸಂದರ್ಭ ತಿಳಿಸಿದರು. ಇದರ ಜತೆಯಲ್ಲೇ ವಿವಿಧ ರೀತಿಯ ಇಂಪ್ಲಾಂಟ್‌ಗಳು, ಫೇಸ್‌ಮೇಕರ್, ಸರ್ಜಿಕಲ್ ಉಪಕರಣಗಳು ಕೂಡಾ ಈ ಸಂಸ್ಥೆಯ ವತಿಯಿಂದ ರೋಗಿಗಳಿಗೆ ಲಭ್ಯವಾಗಲಿದೆ.ಖಾಸಗಿಯಾಗಿ ಎಂಆರ್‌ಐ, ಸಿಟಿಸ್ಕಾನ್‌ಗಾಗಿ ರೋಗಿಗಳು ಸುಮಾರು 8,000 ರೂ.ವರೆಗೆ ಖರ್ಚು ಮಾಡಬೇಕಾಗಿರುತ್ತದೆ. ಇದೀಗ ಈ ವ್ಯವಸ್ಥೆಯ ಮೂಲಕ 3,500 ರೂ. ದರದಲ್ಲಿ ಎಂಆರ್‌ಐ ಸೌಲಭ್ಯ ಲಭ್ಯವಾಗಲಿದೆ ಎಂದವರು ಹೇಳಿದರು.
ರಾಜ್ಯದಲ್ಲಿ ಡಿಸೆಂಬರ್ 5ರೊಳಗೆ ಐದು ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಕೇಂದ್ರಗಳು ಲಭ್ಯವಾಗಲಿದ್ದು, ಡಿಸೆಂಬರ್ 20ರೊಳಗೆ ಮತ್ತೆ ಐದು ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಲಭ್ಯವಾಗಲಿದೆ. ಉಳಿದ 20 ಜಿಲ್ಲೆಗಳಲ್ಲಿ ಜನವರಿ 20ರೊಳಗೆ ಹಾಗೂ ಬಳಿಕ ತಾಲೂಕು ಆಸ್ಪತ್ರೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವ ಖಾದರ್ ತಿಳಿಸಿದರು.


